ಏನಾದರಾಗಲಿ, ಕಾರಂತ ಪ್ರಶಸ್ತಿ ಸ್ವೀಕರಿಸುತ್ತೇನೆ: ಪ್ರಕಾಶ್ ರೈ
ಬೆಂಗಳೂರು, ಅಕ್ಟೋಬರ್ 10: "ಏನಾದರೂ ಆಗಲಿ, ನಾನಂತೂ ಪ್ರಶಸಸ್ತಿ ಸ್ವೀಕರಿಸೋಕೆ ಹೋಗೇ ಹೋಗ್ತೀನಿ" ಇದು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರೈ ಮಾತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತ(10.10.1902-9.12.1997) ಹೆಸರಲ್ಲಿ ಕೊಡಲ್ಪಡುವ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ' ಪ್ರದಾನ ಸಮಾರಂಭ ಶಿವರಾಮ ಕಾರಂತರ ಜನ್ಮದಿನವಾದ ಇಂದು(ಅ.10) ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮದಲ್ಲಿ ನಡೆಯಲಿದೆ.

ಆದರೆ ಕಡಲ ತೀರದ ಭಾರ್ಗವ ಶಿವರಾಮ ಕಾರಂತ ಪ್ರಶಸ್ತಿಗೆ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡುತ್ತಿದ್ದಂತೆಯೇ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮಹಾನ್ ನಟ ಎಂದಿದ್ದ ಪ್ರಕಾಶ್ ರೈ ಅವರಿಗೆ ಈ ಪ್ರಶಸ್ತಿ ತರವಲ್ಲ ಎಂದು ಹಲವರು ದೂರಿದ್ದರು.
ಈ ಕುರಿತು ಮಾತನಾಡಿದ ಪ್ರಕಾಶ್ ರೈ, ನಾನು ಯಾವ ಬೆದರಿಕೆಗೂ ಹೆದರೋಲ್ಲ. ಪ್ರಶಸ್ತಿ ಸ್ವೀಕರಿಸೋಕೆ ಹೋಗಿಯೇ ಹೋಗುತ್ತೇನೆ. ಏನ ಬೇಕಾದರೂ ಆಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಳೆದ 12 ವರುಷಗಳಿಂದ ಕಾರಂತ ಜನ್ಮದಿನೋತ್ಸವ ಅಂಗವಾಗಿ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನೀಡಲಾಗುತ್ತಿದೆ.












Click it and Unblock the Notifications