ದೇಶದಲ್ಲಿ ಮಾನವೀಯ ಮೌಲ್ಯ ಕ್ಷೀಣಿಸುತ್ತಿದೆ: ಯಡಿಯೂರಪ್ಪ
ಬೆಂಗಳೂರು, ಜೂನ್ 23: ದೇಶ ಒಂದು ಕಡೆ ಅಭಿವೃದ್ದಿ ಪಥದತ್ತ ಸಾಗುತ್ತಿದೆ, ಇನ್ನೊಂದೆಡೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದೆ, ಇದೊಂದು ಆತಂಕಕಾರಿ ವಿಚಾರ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಜಯನಗರ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಶನ್ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಮಕ್ಕಳು ಸ್ವಾಮಿ ವಿವೇಕಾನಂದರ ತತ್ವವನ್ನು ಮೈಗೂಡಿಸಿಕೊಳ್ಳಬೇಕಿದೆ. ಉತ್ತಮ ಶಿಕ್ಷಣದಿಂದಾಗಿ, ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ಬಿಎಸ್ವೈ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡುತ್ತಾ, ಜೀವನದಲ್ಲಿ ಮೇಲೆ ಬರಲು ಹಣವೊಂದೇ ಮುಖ್ಯ ಎಂದರೆ ಅದು ತಪ್ಪಾಗುತ್ತದೆ. ಮಕ್ಕಳಿಗೆ ಕಲಿಯಬೇಕು ಎನ್ನುವ ಛಲವಿದ್ದಾಗ, ವಿದ್ಯೆ ತಲೆಗೆ ಹತ್ತುತ್ತದೆ. ಕಾಲೇಜು ಬರುವವರೆಗೂ ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆಗ, ನನ್ನ ತಾಯಿ ಹೇಳಿದಂತೆ ನಡೆದೆ, ಮುಂದೆ ಇಂಗ್ಲಿಷ್ ನಲ್ಲಿ ಮೊದಲ ರ‍್ಯಾಂಕ್ ಪಡೆದೆ ಎಂದು ಸುಧಾಮೂರ್ತಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯ ರೆಡ್ಡಿ, ಉದಯ್ ಗರುಡಾಚಾರ್, ತಾರಾ, ಬಿ ವೈ ವಿಜಯೇಂದ್ರ, ರಕ್ಷಾ ಫೌಂಡೇಶನ್ ಸಂಸ್ಥಾಪಕ ಸಿ ಕೆ ರಾಮಮೂರ್ತಿ, ನಟಿ ಅಮೂಲ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.
ರಕ್ಷಾ ಫೌಂಡೇಶನಿನ ಸಮಾಜಮುಖಿ ಕೆಲಸದಲ್ಲಿ, ವಿವಿಧ ಶಾಲೆಗಳ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ನೋಟ್ ಬುಕ್ ಅನ್ನು ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಐವತ್ತು ಬಡ ವಿದ್ಯಾರ್ಥಿಗಳಿಗೆ ಸೈಕಲ್ ಮತ್ತು ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.

ಸಿ ಕೆ ರಾಮಮೂರ್ತಿ ನೇತೃತ್ವದಲ್ಲಿ ರಕ್ಷಾ ಫೌಂಡೇಶನ್ ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಲ್ಯಾಪ್ ಟಾಪ್, ಸೈಕಲ್, ಗಡಿಯಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಇದು ಒಂಬತ್ತನೇ ವರ್ಷದ ಕಾರ್ಯಕ್ರಮವಾಗಿದೆ.












Click it and Unblock the Notifications