ಸ್ಟಾರ್ಟ್ ಅಪ್‌ಗೆ ಭರ್ಜರಿ ಬಂಪರ್; ಸಿಗುತ್ತೆ ಬರೋಬ್ಬರಿ 50 ಲಕ್ಷ ರೂ.!
ಕರ್ನಾಟಕವು ಉದ್ಯಮಗಳಿಗೆ ಮೊದಲಿನಿಂದಲೂ ಪ್ರೋತ್ಸಹ ನೀಡುತ್ತಲ್ಲೇ ಬಂದಿದೆ. ಇದೇ ಕಾರಣಕ್ಕೆ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಲ್ಲಿ ಈ ಹಿಂದಿಗಿಂತಲೂ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ ಇದೀಗ ರಾಜ್ಯ ಸರ್ಕಾರವು ನವೋದ್ಯಮಿಗಳಿಗೆ ಬಂಪರ್ ಕೊಡುಗೆಯನ್ನೇ ಕೊಟ್ಟಿದೆ. ಈ ಯೋಜನೆಯ ಮೂಲಕ ಬರೋಬ್ಬರಿ 50 ಲಕ್ಷ ರೂಪಾಯಿಯ ವರೆಗೆ ಅನುದಾನ ಸಿಗಲಿದೆ. ಯಾರು ಇದಕ್ಕೆ ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಭಾರತದಲ್ಲೇ ಕರ್ನಾಟಕವು ನವೋದ್ಯಮಕ್ಕೆ ಹಾಗೂ ಸ್ಟಾರ್ಟ್‌ಅಪ್‌ಗೆ ತನ್ನದೇ ಕೊಡುಗೆಯನ್ನು ನೀಡುತ್ತಿದೆ. ಇದೇ ಕಾರಣಕ್ಕೆ ದೇಶದಲ್ಲೇ ನವೋದ್ಯಮ (ಹೊಸ ಉದ್ಯಮ) ಹಾಗೂ ಸ್ಟಾರ್ಟ್‌ಅಪ್‌ನಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಇದೆ. ಇದೀಗ ರಾಜ್ಯ ಸರ್ಕಾರವು ಹೊಸ ನಾವೀನ್ಯತೆ ಹಾಗೂ ಆವಿಷ್ಕಾರಗಳಿಗೆ ಉತ್ತೇಜನ ನೀಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಸರ್ಕಾರವು ಬರೋಬ್ಬರಿ 50 ಲಕ್ಷ ರೂಪಾಯಿಯ ವರೆಗೆ ಅನುದಾನ ನೀಡಲಿದೆ.

ರಾಜ್ಯ ಸರ್ಕಾರದಿದ 'ಎಲಿವೇಟ್- 2024'
ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು 'ಎಲಿವೇಟ್- 2024' ಎನ್ನುವ ಯೋಜನೆಯನ್ನು ಪರಿಚಯಿಸಿದ್ದು, ಈಗಾಗಲೇ ಇದಕ್ಕೆ ಅರ್ಜಿ ಸ್ವೀಕರಿಸಲಾಗುತ್ತಿದೆ. ನವೆಂಬರ್ 29ರ ಸಂಜೆ 5 ಗಂಟೆಯ ವರೆಗೆ ನೀವು ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಇದನ್ನು ರಾಜ್ಯ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ನಾವೀನ್ಯತೆ ಹಾಗೂ ಹೊಸ ಆವಿಷ್ಕಾರವನ್ನು ಪರಿಗಣಿಸಿ ಈ ಅನುದಾನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ ?
ಕರ್ನಾಟಕದ ಈ ಯೋಜನೆಗೆ ನೀವು ಆನ್‌ಲೈನ್‌ನ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ನವೋದ್ಯಮಿಗಳಿಗಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಎಲಿವೇಟ್- 2024ಗೆ missionstartupkarnataka.org / https://t.co/gDpyFOHcAf ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿ ವಾಣಿಜ್ಯೋದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಅತ್ಯಂತ ನಾವಿನ್ಯತೆಯುಳ್ಳ ನವೋದ್ಯಮಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದೆ.
ಸ್ಟಾರ್ಟ್‌ಅಪ್‌ಗಳಿಗೆ 224 ಕೋಟಿ ರೂಪಾಯಿ
ಇನ್ನು ಕರ್ನಾಟಕದಲ್ಲಿ ಈ ಯೋಜನೆಯನ್ನು 2016ರಲ್ಲೇ ಪ್ರಾರಂಭಿಸಲಾಗಿದೆ. ಎಲಿವೇಟ್ ಉತ್ತೇಜ ಎನ್ನುವ ಯೋಜನೆಯ ಮೂಲಕ ಇಲ್ಲಿಯವರೆಗೆ 983 ಸ್ಟಾರ್ಟ್‌ಅಪ್‌ಗಳಿಗೆ ಬರೋಬ್ಬರಿ 224.06 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ದ್ವಿತೀಯ ಹಾಗೂ ತೃತೀಯ ಹಂತ (ಟೈಯರ್ 2 & ಟೈಯರ್ 3 ಸಿಟಿಸ್) ನಗರಗಳ ನವೋದ್ಯಮಗಳಿಗೂ ಉತ್ತೇಜನ ನೀಡಲಾಗುತ್ತಿದೆ.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದಲ್ಲಿ ನವೋದ್ಯಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗುತ್ತಿದೆ. ಎಐ, ರೊಬೋಟಿಕ್ಸ್, ಬ್ಲಾಕ್ ಚೈನ್, ಸ್ಪೇಸ್ ಟೆಕ್ ಹಾಗೂ ಡೀಪ್ ಸ್ಪೇಸ್ ವಿವಿಧ ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಹೊಸ ಪ್ರಯೋಗ, ಪರಿಕಲ್ಪನೆ, ನಾವೀನ್ಯತೆ ಹಾಗೂ ಆವಿಷ್ಕಾರಗಳಿಗೆ ಆರ್ಥಿಕ ಉತ್ತೇಜನ ನೀಡುತ್ತಿದ್ದೇವೆ. ಈ ಯೋಜನೆಯ ಮೂಲಕ ನೆರವು ಪಡೆಯಲು ಇಷ್ಟವಿದ್ದಲ್ಲಿ, ಮೊದಲು ಅವರು ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು ಎಂದಿದ್ದಾರೆ.
ಆವಿಷ್ಕಾರ ಯಾವ ಮಾದರಿ ಅಥವಾ ಎಷ್ಟು ಉತ್ತಮವಾಗಿದೆ. ಅದರ ಪ್ರಮಾಣವನ್ನು ಆಧರಿಸಿ ಅನುದಾನ ಎಷ್ಟು ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಆದರೆ, ಗರಿಷ್ಠ ಅನುದಾನದ ಪ್ರಮಾಣವು 50 ಲಕ್ಷ ರೂಪಾಯಿ ಆಗಿರಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.











Click it and Unblock the Notifications