'₹600 ಕೋಟಿ ವೆಚ್ಚದ ಹೊಂಡಾ ಇ-ಬೈಕ್ ತಯಾರಿಕಾ ಘಟಕ ಬೆಂಗಳೂರಿನಲ್ಲಿ ಆರಂಭ...' MB Patil
ಬೆಂಗಳೂರು, ಸೆಪ್ಟಂಬರ್ 09: ಬೆಂಗಳೂರಿನಲ್ಲಿ ಇದೇ ವರ್ಷ ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶ 2025ದಲ್ಲಿ ಮಾಡಿಕೊಂಡಿರುವ ಒಪ್ಪಂದಗಳ ಬಳಿಕ ಒಂದೊಂದೆ ಕಂಪನಿ ನಗರದಲ್ಲಿ ಕಾರ್ಯೋನ್ಮುಖವಾಗುತ್ತಿವೆ. ಹೂಡಿಕೆ ಮಾಡುತ್ತಿವೆ. ಇದೀಗ ಜಪಾನಿನ ಆಟೋ ಮೊಬೈಲ್, ಮೋಟರ್ ಸೈಕಲ್ ದೈತ್ಯ ಕಂಪನಿ 'ಹೊಂಡಾ' ಒಪ್ಪಂದಂತೆ ತನ್ನ ತಯಾರಿಕೆ ಘಟಕ ಆರಂಭಿಸಲಿದೆ.
ಸುಮಾರು ₹600 ಕೋಟಿ ಬಂಡವಾಳ ಹೂಡಿಕೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕವು ಶೀಘ್ರದಲ್ಲಿಯೇ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದೆ. ಜಪಾನಿನ ಹೋಂಡಾ ಕಂಪನಿ ಮುಖ್ಯಸ್ಥರ ಭೇಟಿ ಬಳಿಕ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕೃತ ಮಾಹಿತಿ ನೀಡಿದರು. ಭಾರತದಲ್ಲಿನ ತನ್ನ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕವು ಬೆಂಗಳೂರಿನ ಆರಂಭವಾಗುವುದ ಹೆಮ್ಮೆಯ ಸಂಗತಿ ಎಂದರು.

ಹೋಂಡಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹರಾ ಅವರ ಜೊತೆಗಿನ ಭೇಟಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಾಹನ ತಯಾರಿಕಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ಹೇಳಿದರು.
ಬಹುರಾಷ್ಟ್ರೀಯ ಕಂಪನಿಗಳ ಜತೆಗಿನ ಮಾತುಕತೆ ಫಲಪ್ರದ
ಸಚಿವರ ನೇತೃತ್ವದಲ್ಲಿ ಜಪಾನ್‌ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗವು, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಅತ್ಯಾಧುನಿಕ ತಯಾರಿಕಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿಯ ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳ ಜೊತೆಗೆ ಸೋಮವಾರ ಫಲಪ್ರದ ಮಾತುಕತೆ ನಡೆಸಿದೆ.
ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚುವರಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನಿಯೋಗವು ಜಪಾನ್‌ಗೆ ಭೇಟಿ ನೀಡುತ್ತಿದೆ. ಟೋಕಿಯೊ ಎಲೆಕ್ಟ್ರಾನ್, ಮಿತ್ಸುಬಿಸಿ ಎಲೆಕ್ಟ್ರಿಕ್, ಹೋಂಡಾ, ಯೋಕೊಗವಾ ಎಲೆಕ್ಟ್ರಿಕ್ ಮತ್ತು ರೆಸ್ಟರ್ ಹೋಲ್ಡಿಂಗ್ಸ್ ಕಂಪನಿಗಳ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸುವ ಮತ್ತು ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ನಿಯೋಗ ಚರ್ಚಿಸಲಾಗಿದೆ.

ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆಯೂ ಸೇರಿದಂತೆ ರಾಜ್ಯದಲ್ಲಿ ಪೂರಕ ಪರಿಸರ ಇದೆ. ಕಂಪನಿಯ ಭವಿಷ್ಯದ ಬೆಳವಣಿಗೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನು ಟೋಕಿಯೊ ಎಲೆಕ್ಟ್ರಾನ್‌ನ ಉನ್ನತ ಅಧಿಕಾರಿಗಳಿಗೆ ಸಚಿವರು ಮನದಟ್ಟು ಮಾಡಿಕೊಟ್ಟರು.
ಮಿತ್ಸುಬಿಸಿ ಎಲೆಕ್ಟ್ರಿಕ್ ಜೊತೆಗಿನ ಭೇಟಿ ಸಂದರ್ಭದಲ್ಲಿ, ಕಂಪನಿಯು ಕರ್ನಾಟಕದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿತು. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣಕ್ಕೆ ತಲುಪಲಿದ್ದು, ವಿಸ್ತರಣಾ ಅವಕಾಶಗಳನ್ನು ಪರಿಶೀಲಿಸುತ್ತಿರುವುದಾಗಿ ಯೋಕೊಗವಾ ಎಲೆಕ್ಟಿಕ್ ತಿಳಿಸಿದೆ. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಸೇವೆಗಳನ್ನು (ಇಎಂಎಸ್) ಆರಂಭಿಸಲು ಮುಂದಾಗಬೇಕು ಎಂದ ಸಚಿವರು, ಜಪಾನಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯದ ಪ್ರಮುಖ ಕಂಪನಿಯಾಗಿರುವ ರೆಸ್ಟರ್ ಹೋಲ್ಡಿಂಗ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications