ಬೆಂಗಳೂರಲ್ಲಿ ಮನೆ ನಿರ್ಮಾಣ, ಆಸ್ತಿದಾರರಿಗೆ ಗುಡ್‌ನ್ಯೂಸ್: "ನಂಬಿಕೆ ನಕ್ಷೆ" ಯೋಜನೆ ಪರಿಚಯಿಸಿದ ಬಿಬಿಎಂಪಿ!
ಬೆಂಗಳೂರಿನ ಆಸ್ತಿದಾರರು ಹಾಗೂ ಕಟ್ಟಡ ನಿರ್ಮಾಣ ಮಾಡುವವರಿಗೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯು ಇದೀಗ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಆಸ್ತಿಗಳ ಡಿಜಿಟಲೀಕರಣ ಪ್ರಕ್ರಿಯೆ ಈಗಾಗಲೇ ಜೋರಾಗಿಯೇ ಇದೆ. ಇದೀಗ ನಕ್ಷೆ ಯೋಜನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮಹತ್ವದ ಹೆಜ್ಜೆಯನ್ನೇ ಇರಿಸಿದೆ. ನಗರದ ಆಸ್ತಿದಾರರು ನಕ್ಷೆ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ತಪ್ಪಿಸಲು ಪಾಲಿಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಂಬಿಕೆ ನಕ್ಷೆ ಎನ್ನುವ ಯೋಜನೆಯನ್ನು ಪರಿಚಯಿಸಲಾಗಿದೆ. ಏನಿದು ನಂಬಿಕೆ ನಕ್ಷೆ & ಇದರಿಂದ ಆಗುವ ಲಾಭಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇದೀಗ ನಂಬಿಕೆ ನಕ್ಷೆ (ನಂಬಿಕಯೊಂದಿಗೆ ಪರಿಶೀಲಿಸುವ ವ್ಯವಸ್ಥೆ - Trust & Verify) ಎನ್ನುವ ಮಹತ್ವದ ಯೋಜನೆಯೊಂದನ್ನು ಪರಿಚಯಿಸುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಲು ಆಸ್ತಿದಾರರು ಮಂಜೂರಾತಿ ಪಡೆಯಲು ಪಾಲಿಕೆಯ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಇದರಿಂದ ಮನೆ ನಿರ್ಮಾಣ ಮಾಡುವರಿಗೆ ಭಾರೀ ಸಮಸ್ಯೆ ಆಗಲಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಂಬಿಕೆ ನಕ್ಷೆ ಎನ್ನುವ ಯೋಜನೆಯನ್ನು ಪರಿಚಯಿಸಿರುವುದಾಗಿ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಂಬಿಕೆಗಳೊಂದಿಗೆ ಪರಿಶೀಲಿಸುವ' ವಿಧಾನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 50X80 (375.00 ಚ.ಮೀ) ವಿಸ್ತೀರ್ಣದ ವರೆಗಿನ ನಿವೇಶನಗಳಲ್ಲಿ ನಾಲ್ಕು ವಸತಿ ಘಟಕಗಳಿಗೆ ಮೀರದ ಕಟ್ಟಡಗಳಿಗೆ ಆನ್‌ಲೈನ್ (ಆಟೋಮೇಟೆಡ್) ತಂತ್ರಾಂಶದ ಮೂಲಕ ಪಾಲಿಕೆಯಲ್ಲಿ ಪರವಾನಿಗೆ (ಲೈಸೆನ್ಸ್) ಪಡೆದಿರುವ ಪಾಲಿಕೆಯಲ್ಲಿನ ವಾಸ್ತುಶಿಲ್ಪಗಳು/ಎಂಜಿನಿಯರ್‌ಗಳು/ಸೂಪರ್‌ವೈಸರ್‌ಗಳ ಸಹಕಾರದೊಂದಿಗೆ ನಿರ್ವಹಿಸುವ ವ್ಯವಸ್ಥೆಗೆ ಸರ್ಕಾರವು ಅನುಮೋದನೆ ನೀಡಿದೆ ಎಂದು ಬಿಬಿಎಂಪಿ ಹೇಳಿದೆ.
ಈ ನೂತನ ಯೋಜನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, 11.03.2024 ರಂದು ಬೆಂಗಳೂರಿನ ಜನರಿಗೆ ಪರಿಚಯಿಸಿದ್ದಾರೆ. ನಗರದಲ್ಲಿ ಕಟ್ಟಡ ನಿರ್ಮಾಣದಾರರು ಪಾಲಿಕೆಯಲ್ಲಿ ನೊಂದಾಯಿಸಿರುವ ಎಂಜಿನಿಯರ್ ಹಾಗೂ ವಾಸುಶಿಲ್ಪದಾರರ ಮುಖಾಂತರ ನಿವೇಶನದ ದಾಖಲೆಗಳು ಮತ್ತು ಕಟ್ಟಡ ನಕ್ಷೆಗಳನ್ನು ಪಾಲಿಕೆಯ ವೆಬ್‌ಸೈಟ್ https://bpas.bbmpgov.in/BPAMSClient4/Default.aspx?TAV=1 ಗೆ ಭೇಟಿ ನೀಡಿ ಬಿಲ್ಡಿಂಗ್ ಪರ್ಮಿಷನ್ಸ್ ಅಡಿಯಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆಯೊಂದಿಗೆ ಕಂದಾಯ ವಿಭಾಗದಿಂದ ಅನ್‌ಲೈನ್‌ನಲ್ಲಿ ಅಭಿವೃದ್ಧಿಪಡಿಸುತ್ತಿರುವ ಇ-ಆಸ್ತಿಯನ್ನು ಸ್ವಯಂಚಾಲತ ಪ್ರಕ್ರಿಯೆ ಮೂಲಕ ಜೋಡಿಸಲಾಗುತ್ತಿದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಂಚಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆಯು ಸಂಪೂರ್ಣವಾಗಿ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಕೆಲಸ ಮಾಡಲಿದೆ. ಆ ನಂತರ ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಗಳ ಯಾವುದೇ ಹಸ್ತಕ್ಷೇಪವಿಲ್ಲದೆ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1993 ತಾತ್ಕಾಲಿಕ ನಕ್ಷೆಗಳ ವಿತರಣೆ: ಇನ್ನು ಬೆಂಗಳೂರಿನಲ್ಲಿ ಇಲ್ಲಿಯ ವರೆಗೆ ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆಯಲ್ಲಿ ಅರ್ಜಿಯನ್ನು ಸಲ್ಲಿಸಿದ ದಿನದಂದೇ ತಾತ್ಕಾಲಿಕ ನಕ್ಷೆಗೆ ಅನುಮೋದನೆಯನ್ನು ನೀಡಲಾಗುತ್ತಿದೆ. ಇದರಿಂದ ತಾತ್ಕಾಲಿಕ ನಕ್ಷೆ ಮಂಜೂರಾತಿಯಲ್ಲಿ ಯಾವುದೇ ವಿಳಂಬ ಮಾಡದೆ ಕೂಡಲೇ ಅನುಮೋದನೆ ನೀಡುತ್ತಿರುವುದಾಗಿ ಪಾಲಿಕೆ ಹೇಳಿದೆ. ಈ ಮೂಲಕ ಇಲ್ಲಿಯವರೆಗೆ 1993 ಅರ್ಜಿಗಳಿಗೆ ತಾತ್ಕಾಲಿಕ ನಕ್ಷೆಯನ್ನು ವಿತರಿಸಲಾಗಿದೆ.
ಬೆಂಗಳೂರಿನಲ್ಲಿ ಕಟ್ಟಡಗಳ ತಪ್ಪು ನಕ್ಷೆ ಹಾಗೂ ನಿಯಮ ಬಾಹಿರವಾದ ಕಟ್ಟಡಗಳ ನಿರ್ಮಾಣದಿಂದ ಭಾರೀ ಸಮಸ್ಯೆ ಆಗುತ್ತಿದೆ. ಇತ್ತೀಚೆಗೆ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದಿದ್ದು, ಭಾರೀ ದೊಡ್ಡ ಅನಾಹುತವೇ ಸಂಭವಿಸಿತ್ತು. ಇದೀಗ ತಪ್ಪು ನಕ್ಷೆಗಳು ಅಥವಾ ನಿಯಮ ಉಲ್ಲಂಘನೆ ಮಾಡಿ ನಕ್ಷೆಗಳು ಅನುಮೋದನೆ ಆಗುವುದನ್ನು ತಡೆಯಲು ಈ ಯೋಜನೆಯು ಸಹಕಾರಿಯಾಗಿದೆ ಎಂದು ಹೇಳಲಾಗಿದೆ.
ನಂಬಿಕೆ ನಕ್ಷೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡೀಮ್ ಅನುಮೋದನೆಯನ್ನು ಅಳವಡಿಸಿಲ್ಲ. ಅಲ್ಲದೇ ಈ ನೂತನ ವ್ಯವಸ್ಥೆಯು ಹೊಸದಾಗಿ ಮತ್ತು ನೂತನ ಮಾದರಿಯಾಗಿರುವುದು. ಬಿಬಿಎಂಪಿಯ ಅಧಿಕಾರಿಗಳು/ಸಿಬ್ಬಂದಿ/ವಾಸ್ತುಶಿಲ್ಪಗಳು ಮತ್ತು ಸಾರ್ವಜನಿಕರು ಪೂರ್ಣವಾಗಿ ತಿಳಿದುಕೊಳ್ಳಲು ಸ್ವಲ್ಪ ಸಮಯಾವಕಾಶವನ್ನು ನೀಡಿರುವುದಾಗಿಯೂ ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಬಿಬಿಎಂಪಿಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.












Click it and Unblock the Notifications