ಹಿಜಾಬ್ ವಿವಾದ; ಸಂಜೆ ಮಹತ್ವದ ಸಭೆ; ಸೋಮವಾರದಿಂದಲೇ ಶಾಲಾ- ಕಾಲೇಜು ಆರಂಭ!?
ಬೆಂಗಳೂರು, ಫೆಬ್ರವರಿ 10: ಹಿಜಾಬ್ ಮತ್ತು ಕೇಸರಿ ಶಾಲು ನಡುವಿನ ಸಂಘರ್ಷ ಹೆಚ್ಚಾದ ಹಿನ್ನೆಲೆ ಸರ್ಕಾರ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿತ್ತು. ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಈ ಬಗ್ಗೆ ಇದುವರೆಗೂ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ. ನಾಳೆಗೆ ಸರ್ಕಾರ ಆದೇಶ ಮಾಡಿದ ರಜೆ ಮುಗಿಯುತ್ತದೆ. ಕೊರೊನಾ ಮೂರನೇ ಅಲೆಯಲ್ಲೇ ನಾವು ಶಾಲೆ ಓಪನ್ ಮಾಡಿದ್ದೀವಿ. ಈಗ ಕಿಡಿಗೇಡಿಗಳ ಕೃತ್ಯದಿಂದ ಕಾಲೇಜು ಬಂದ್ ಮಾಡುವ ಅನಿವಾರ್ಯ ಆಗಿದೆ. ಶನಿವಾರ, ಭಾನುವಾರ ರಜೆ ಇದೆ, ಸೋಮವಾರ ಬಹುತೇಕ ಶಾಲೆ ಓಪನ್ ಆಗಲಿದೆ ಎಂದರು.
ಮಕ್ಕಳ ಮನಸ್ಸು ಕೆಡಬಾರದು, ಮಕ್ಕಳ ನಡುವೆ ವೈಮನಸ್ಸು ಆಗಬಾರದು. ಕೋರ್ಟ್ ತೀರ್ಪು ಬರುವವವರೆಗೆ ಹಿಜಾಬ್ ಬದಿಗಿಟ್ಟು ಕಾಲೇಜು ಬನ್ನಿ. ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಆಚರಣೆಗಳ ಕೇಂದ್ರಗಳಲ್ಲ ಎಂದು ಮುಸ್ಲಿಂ ಯುವತಿಯರಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿಕೊಂಡರು.

ಇದೇ ವೇಳೆ ಮಂಡ್ಯದಲ್ಲಿ ವಿದ್ಯಾರ್ಥಿನಿಗೆ ಬಹುಮಾನ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇವೆಲ್ಲವನ್ನೂ ಕೂಡ ತನಿಖೆ ಮಾಡಬೇಕಿದೆ. ಇವರ ಹಿಂದೆ ಒಂದು ತಂಡ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಇದೇ ವೇಳೆ ಶಾಲಾ, ಕಾಲೇಜುಗಳಿಗೆ ರಜೆ ವಿಸ್ತರಣೆಗೊಳಿಸುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಶೀಘ್ರವೇ ತೀರ್ಪು ಬರುವ ವಿಶ್ವಾಸ ಇದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ಕಾಲೇಜು ಬಂದ್ ಮಾಡಿ ಅಂತ ಹೇಳಿದ್ದರು. ಸಿದ್ದರಾಮಯ್ಯನವರ ಮಾತನ್ನು ಪರಿಗಣಿಸಿ ರಜೆ ಕೊಡಲಾಗಿದೆ. ಎಲ್ಲಾ ನಾಯಕರ ಅಭಿಪ್ರಾಯ ಪಡೆದು ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಲ್ಲಿ ಮನಸ್ಸು ಕೆಡಬಾರದು. ನಿತ್ಯ ಮಕ್ಕಳು ಶಾಲೆಯಲ್ಲಿ ಮುಖ ನೋಡಬೇಕು. ಹೀಗಾಗಿ ನಾವು ಮಕ್ಕಳನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಶಾಲೆ ಆರಂಭದ ಕುರಿತು ಸಿಎಂ ಬೊಮ್ಮಾಯಿ ಹೇಳಿದ್ದೇನು?
ಶಾಲೆಗಳಲ್ಲಿ ಸಮವಸ್ತ್ರ ಕುರಿತ ಅರ್ಜಿ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದ್ದು, ಇಂದು ಮಧ್ಯಾಹ್ನ ಕೇಸ್ ವಿಚಾರಣೆ ಆಗಲಿದೆ. ಈಗಾಗಲೇ ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಹೀಗಾಗಿ ಯಾವ ಸಂಘಟನೆ ಗಳು ಕೂಡ ವಿದ್ಯಾರ್ಥಿಗಳಿಗೆ ಪ್ರಚೋದನೆ ಕೊಡಬಾರದು. ಹಿಜಾಬ್ ವಿವಾದ ಕೋರ್ಟ್‌ನಲ್ಲಿದೆ, ಕೋರ್ಟ್ ತೀರ್ಪಿಗಾಗಿ ಕಾಯೋಣ. ಶಾಂತಿ ಕದಡುವ ಬಗ್ಗೆ ಯಾರು ಕೂಡ ಮಾತಾಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡರು.
ಶಾಲಾ- ಕಾಲೇಜು ಆರಂಭದ ಕುರಿತು ಇಂದು ಸಂಜೆ ಸಭೆ
ಶಾಲಾ- ಕಾಲೇಜು ಕುರಿತಾಗಿ ಸಂಜೆ ಶಿಕ್ಷಣ ಸಚಿವ ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಲಾಗುತ್ತದೆ. ಇಲ್ಲಿ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು. ಹೊರಗಡೆಯ ಸಂಘಟನೆಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕೋರ್ಟ್ ಆದೇಶವನ್ನು ಎಲ್ಲರೂ ಕಾಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿವಾದಿತ ಹೇಳಿಕೆ ನೀಡುವುದನ್ನು ನಿಲ್ಲಿಸಿ
ಇನ್ನು ಮುಂದೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಯಾರೂ ಏನು ಹೇಳಿಕೆ ನೀಡದಂತೆ ಮನವಿ ಮಾಡುತ್ತೇನೆ ಎಂದು ಹೇಳುವ ಮೂಲಕ ಸಂಪುಟದ ಸಚಿವರು, ಶಾಸಕರು ಮತ್ತು ವಿಪಕ್ಷ ನಾಯಕರ ಹೇಳಿಕೆಗೆ ಬೇಸರ ಹೊರಹಾಕಿದರು. ನಾವು ಜವಬ್ದಾರಿಯುತ ಸ್ಥಾನದಲ್ಲಿ ಇರುವಂತವರು. ಯಾರೇ ಆದರೂ ಸರಿ, ಇಲ್ಲಿವರೆಗೂ ಮಾತಾಡಿದ್ದು ಸಾಕು. ಇನ್ನು ಮೇಲೆ ಆದರೂ ಆ ರೀತಿ ಮಾತಾಡೋದನ್ನು ನಿಲ್ಲಿಸಿ. ವಿಷಯ ಕೋರ್ಟ್‌ನಲ್ಲಿದೆ, ಕೋರ್ಟ್ ತೀರ್ಪು ಬರುವವರೆಗೂ ಕಾಯೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.












Click it and Unblock the Notifications