ಸಚಿವರ ಮನೆ ರಸ್ತೆಗುಂಡಿ ಮಾತ್ರವಲ್ಲ, ಜನಸಾಮಾನ್ಯರತ್ತಲೂ ನೋಡಿ; ಹೈಕೋರ್ಟ್ ಸೂಚನೆ
ಬೆಂಗಳೂರು, ಅಕ್ಟೋಬರ್ 08: ನಗರದೆಲ್ಲೆಡೆ ಕೈಗೊಂಡಿರುವ ರಸ್ತೆಗಳ ಗುಂಡಿ ತುಂಬುವ ಕೆಲಸದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ಗುರುವಾರ ನಿರ್ದೇಶನ ನೀಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಿದೆ. ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿ ವಿಜಯನ್ ಮೆನನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮಾಡುವ ಸಂದರ್ಭ ಈ ಹೇಳಿಕೆ ನೀಡಿದೆ.
ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿದ ನಂತರ ಎರಡು ಮೂರು ತಿಂಗಳಿನಲ್ಲಿ ಮತ್ತೆ ಆ ಗುಂಡಿಗಳು ತೆರೆದುಕೊಳ್ಳುತ್ತವೆ ಎಂದು ದೂರಲಾಗಿದೆ. ಹೀಗಾಗಿ ನ್ಯಾಯಪೀಠವು, ಗುಂಡಿಗಳನ್ನು ಭರ್ತಿ ಮಾಡುವ ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಗುಣಮಟ್ಟವನ್ನು ಮೊದಲು ಖಾತರಿಪಡಿಸಿಕೊಳ್ಳಿ ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಬಿಬಿಎಂಪಿ ಪರವಾಗಿ ವಕೀಲ ಕೆ.ಎನ್.ಪುಟ್ಟೇಗೌಡ ನ್ಯಾಯಾಲಯದೊಂದಿಗೆ ಸಂವಹನ ನಡೆಸಿದ್ದು, 'ನಗರದಲ್ಲಿ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಸಂಬಂಧ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ದಿನನಿತ್ಯ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಏಜೆನ್ಸಿ ನಡೆಸುತ್ತಿದೆ. ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ನಿರ್ದಿಷ್ಟ ಸಮಯದಲ್ಲಿ ಕೆಲಸ ಸಾಗುತ್ತಿಲ್ಲ. ಗುಂಡಿ ಮುಚ್ಚುವ ಕೆಲಸದ ಸ್ಥಿತಿಗತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು' ಎಂದು ತಿಳಿಸಿದರು.
ಬಿಬಿಎಂಪಿ ಅಳವಡಿಸಿಕೊಂಡಿರುವ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಜನ ಸಾಮಾನ್ಯರು ವಾಸಿಸುತ್ತಿರುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ ಎಂದು ಹೇಳಿದ ನ್ಯಾಯಾಲಯ, 'ಹೈಕೋರ್ಟ್‌ಗೆ ಸಾಗುವ ರಸ್ತೆಗಳ ಅಥವಾ ಸಚಿವರ ಮನೆಗಳ ರಸ್ತೆಗಳ ಗುಂಡಿ ಮುಚ್ಚಿದರೆ ಸಾಲದು. ಸಾಮಾನ್ಯ ಜನರನ್ನೂ ನೋಡಿ. ಜನಸಾಮಾನ್ಯರು ಬಳಸುವ ನಗರದ ರಸ್ತೆಗಳ ಕೆಟ್ಟ ಸ್ಥಿತಿಯನ್ನು ಬಿಬಿಎಂಪಿ ನೋಡಬೇಕು' ಎಂದಿದೆ.
ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ಒಟ್ಟು 198 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ ಎಂದು ಬಿಬಿಎಂಪಿ ಈಚೆಗೆ ಮಾಹಿತಿ ನೀಡಿತ್ತು. ಇದುವರೆಗೆ ನಗರದಲ್ಲಿ 1,334 ಗುಂಡಿಗಳನ್ನು ಮುಚ್ಚಿದ್ದು, ಕೆಲವೇ ಕೆಲಸ ಬಾಕಿ ಇದೆ. ಅದನ್ನು ಶೀಘ್ರವೇ ಮುಗಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ತಿಳಿಸಿದ್ದರು. ಇದಾಗ್ಯೂ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಸೆಪ್ಟಂಬರ್ 20 ರವೆರೆಗೆ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಸರ್ಕಾರ ಗಡುವು ನೀಡಿತ್ತು. ನಂತರ ಹತ್ತು ದಿನಗಳ ಹೆಚ್ಚಿನ ಅವಧಿ ನೀಡಲಾಗಿತ್ತು. ಆದರೆ ಆ ಗಡುವು ಪೂರ್ಣಗೊಂಡರೂ ನಗರದ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಆಗಿಲ್ಲ. ಹೀಗಾಗಿ ಬಿಬಿಎಂಪಿಗೆ ಕಂದಾಯ ಸಚಿವ ಆರ್ ಅಶೋಕ್, ಅಕ್ಟೋಬರ್ 1ರಂದು ಹತ್ತು ದಿನಗಳ ಹೆಚ್ಚಿನ ಅವಧಿಯನ್ನು ನೀಡಿದ್ದಾರೆ. ಒಳ ರಸ್ತೆಗಳನ್ನು ಸ್ಥಳೀಯ ಗುತ್ತಿಗೆದಾರರು 25 ದಿನದಲ್ಲಿ ಮುಚ್ಚಬೇಕು ಎಂದು ಸೂಚನೆ ಕೊಟ್ಟಿದ್ದಾರೆ.
"ಬಿಬಿಎಂಪಿ ವ್ಯಾಪ್ತಿಯಲ್ಲಿ 13,874 ಕಿ. ಮೀ. ರಸ್ತೆ ಇದೆ. ಈ ಪೈಕಿ 1,344 ಕಿ. ಮೀ. ರಸ್ತೆಯಲ್ಲಿ ವಾಹನ ಸಂಚಾರ ನಡೆಸುತ್ತದೆ. 295 ಕಿ. ಮೀ. ರಸ್ತೆ ಸುಸ್ಥಿತಿಯಲ್ಲಿದೆ. 449 ಕಿ. ಮೀ. ರಸ್ತೆ ಹಾಳಾಗಿದೆ. 246 ಕಿ. ಮೀ. ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಕರ್ನಾಟಕ ಹೈಕೋರ್ಟ್ ಬಿಬಿಎಂಪಿ ಮೇಲೆ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ. ಬಿಬಿಎಂಪಿ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಚಾರಣೆ ಸಮಯ ಎಚ್ಚರಿಕೆಯನ್ನು ನೀಡಿದೆ.












Click it and Unblock the Notifications