Actor Darshan: ದರ್ಶನ್ ಮನವಿ ಪುರಸ್ಕರಿಸಿದ ಹೈಕೋರ್ಟ್; ಮಾಧ್ಯಮಗಳಿಗೆ ನಿರ್ಬಂಧ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಲ್ಲಿರುವ ಚಾರ್ಜ್‌ಶೀಟ್‌ನಲ್ಲಿರುವ ಗೌಪ್ಯ ಮಾಹಿತಿಯನ್ನು ಪ್ರಸಾರ, ಪ್ರಕಟ ಅಥವಾ ಹಂಚಿಕೆ ಮಾಡದಂತೆ ವಿದ್ಯುನ್ಮಾನ, ಮುದ್ರಣ & ಸಾಮಾಜಿಕ ಮಾಧ್ಯಮಗಳಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಸೋಮವಾರ ನಟ ದರ್ಶನ್ ಪರ ವಕೀಲರು ಚಾರ್ಜ್‌ಶೀಟ್‌ನಲ್ಲಿದ್ದ ಮಾಹಿತಿ ಸೋರಿಕೆಯಾಗಿದ್ದು, ಅವುಗಳ ಪ್ರಸಾರಕ್ಕೆ ತಡೆ ಕೊಡಬೇಕು ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು, ಇಂದು ಆದೇಶವನ್ನು ಪ್ರಕಟಿಸಿದ್ದು, ದರ್ಶನ್ ಮನವಿಯನ್ನು ಪುರಸ್ಕರಿಸಿ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿದೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಈ ಆದೇಶವನ್ನು ಪ್ರತಿವಾದಿ ಮಾಧ್ಯಮಗಳಿಗೆ ರವಾನಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ಕೊಟ್ಟಿದೆ.
ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಸೋಮವಾರ ಅರ್ಜಿಯ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಹಾಜರಾಗಿದ್ದರು. "ವಿದ್ಯುನ್ಮಾನ ಮಾಧ್ಯಮಗಳು ದಿನಪೂರ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಯನ್ನು ಪೂರ್ವಗ್ರಹ ಪೀಡಿತವಾಗಿ ಪ್ರಸಾರ ಮಾಡುತ್ತಿವೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ರೀತಿ ಸುದ್ದಿಯನ್ನು ಪ್ರಸಾರ ಮಾಡುವುದು ಅಥವಾ ಮುದ್ರಣ ಮಾಧ್ಯಮಗಳಲ್ಲಿ ವರದಿ ಪ್ರಕಟಿಸುವುದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಂತ್ರಣ ಕಾಯಿದೆ ಉಲ್ಲಂಘನೆಯಾಗಿದ್ದು, ದರ್ಶನ್ ಅವರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯೂ ಆಗಿದ್ದು, ಮಾಧ್ಯಮಗಳನ್ನು ನಿಯಂತ್ರಿಸಲು ಆದೇಶ ಕೊಡಬೇಕು ಎಂದು ಮನವಿ ಮಾಡಿದ್ದರು.
ಅರ್ಜಿದಾರರ ಪರ ವಕೀಲರ ಮನವಿ ಪುರಸ್ಕರಿಸಿದ್ದ ಪೀಠ ಆದೇಶ ಬರೆಸಲು ಆರಂಭಿಸುತ್ತಿದ್ದಂತೆ ಪ್ರತಿವಾದಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿದ್ದು, ಇವರಲ್ಲಿ ಯಾರನ್ನು ನಿಯಂತ್ರಿಸಬೇಕು, ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಂಬಂಧಪಟ್ಟ ವಿಚಾರ, ಅರ್ಜಿದಾರರು ಈ ರೀತಿ ಆದೇಶ ಪಡೆಯಲು ಸಾಧ್ಯವಿಲ್ಲ, ನಿರ್ದಿಷ್ಟವಾದ ಮಾಧ್ಯಮ ಅಥವಾ ಚಾನೆಲ್ ವಿರುದ್ಧ ದೂರು ಕೊಟ್ಟರೆ ಸಚಿವಾಲಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು ಅರವಿಂದ ಕಾಮತ್ ಅವರಿಗೆ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲವಾ ಎಂದು ಪ್ರಶ್ನೆ ಮಾಡಿತು. ಇದಕ್ಕೆ ಉತ್ತರ ನೀಡಿದ ಕಾಮತ್, ಅನಿರ್ದಿಷ್ಟ ವಿಧಾನದಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಅರ್ಜಿದಾರರು ನಿರ್ದಿಷ್ಟ ಮಾಧ್ಯಮಗಳನ್ನು ಹೆಸರಿಸಿ ದೂರು ಕೊಟ್ಟರೆ ಅವರ ವಿರುದ್ಧ ಸಚಿವಾಲಯ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.












Click it and Unblock the Notifications