ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಕೈದಿಗಳು ಒಂದೇ ಕಾರಾಗೃಹಕ್ಕೆ ಸ್ಥಳಾಂತರ ಅರ್ಜಿ ವಜಾ
ಬೆಂಗಳೂರು, ಮಾರ್ಚ್ 22: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಕೈದಿಗಳಿಗೆ ಜೀವ ಭಯವಿರುವುದು ಹಾಗೂ ತಮ್ಮ ವಕೀಲರೊಂದಿಗೆ ಚರ್ಚೆ ನಡೆಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಲ್ಲದೇ, ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳೊಂದಿಗೆ ವಕೀಲರು ಸಂಭಾಷಣೆ ನಡೆಸಲು ಅತ್ಯುತ್ತಮ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರವೀಣ್ ನೆಟ್ಟಾರು ಕೊಲೆ ಆರೋಪದಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿರುವ ಅಬ್ದುಲ್ ಬಷೀರ್ ಸೇರಿದಂತೆ 11 ಕೈದಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶವನ್ನು ನೀಡಿದೆ.
ಹೈಕೋರ್ಟ್ ಆದೇಶವೇನು..?
ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಲು ಹೆಡ್‌ಫೋನ್‌ಗಳನ್ನು ಒದಗಿಸಬೇಕು ಆಗ ಮಾತ್ರ ಗೌಪ್ಯತೆ ಉಲ್ಲಂಘನೆಯಾಗುವ ಆರೋಪ ಎದುರಾಗುವುದಿಲ್ಲ. ಹೀಗಾಗಿ ಈ ಸೌಲಭ್ಯ ಇಲ್ಲದ ಜೈಲುಗಳಲ್ಲಿ ಸರ್ಕಾರ ಶೀಘ್ರದಲ್ಲಿ ಜಾರಿ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಕೈದಿಗಳನ್ನು ಸುರಕ್ಷಿತರನ್ನಾಗಿಡುವುದು ಸರ್ಕಾರದ ಕರ್ತವ್ಯ. ಒಂದು ವರ್ಷದ ಹಿಂದೆ ನಡೆದ ಅಹಿತಕರ ಘಟನೆಯ ಕಾರಣದಿಂದ ಅರ್ಜಿದಾರರನ್ನು ಒಂದೇ ಜೈಲಿನಲ್ಲಿರಿಸುವುದಕ್ಕೆ ಕಾರಣವಾಗುವುದಿಲ್ಲ. ಆ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಮತ್ತು ಅವರ ಜೀವಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಭರವಸೆ ನೀಡಿದ್ದಾರೆ.
ಈ ಪ್ರಕರಣಲ್ಲಿ ಬಂಧನಕ್ಕೊಳಗಾಗಿರುವ ಎಲ್ಲ ಆರೋಪಿಗಳು ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಒಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದರಿಂದ ಇನ್ನಿತರರನ್ನು ಒಂದೇ ಕಡೆ ಇಡುವುದು ಸೂಕ್ತವಲ್ಲ. ಆದ ಕಾರಣದ ಸ್ಥಳಾಂತರ ಅತ್ಯಗತ್ಯವಾಗಿದೆ. ಆದ್ದರಿಂದ ಅರ್ಜಿ ವಜಾಗೊಳಿಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ ಬಳಿಕ ಹಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
2023ರ ಜನವರಿಯಲ್ಲಿ ಪ್ರಕರಣದ ಆರೋಪಿಯಾಗಿರುವ ಮಹಮ್ಮದ್ ಜಬೀರ್ ಎಂಬುವರು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಪ್ಪೊಪ್ಪಿಕೊಳ್ಳುವುದಾಗಿ ತಿಳಿಸಿ ಕ್ಷಮಾಪಣೆ ಕೋರಿದ್ದರು. ಇದೇ ಕಾರಣದಿಂದ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿ, ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡುವುದಕ್ಕೆ ಮನವಿ ಮಾಡಿತ್ತು. ಇದನ್ನು ನ್ಯಾಯಾಲಯ ಪರಿಗಣಿಸಿದ್ದು, ಎಲ್ಲ ಆರೋಪಿಗಳನ್ನು ವಿವಿಧ ನ್ಯಾಯಾಲಯಗಳಿಗೆ ಸ್ಥಳಾಂತರ ಮಾಡುವುದಕ್ಕೆ ಅನುಮೋದನೆ ನೀಡಿತ್ತು.
ಈ ನಡುವೆ ಈ ಕೈದಿಗಳು ಬೆಳಗಾವಿ ಕೇಂದ್ರ ಕಾರಾಗೃಹ ಪ್ರವೇಶ ಮಾಡುವ ಸಂದರ್ಭದಲ್ಲಿ ಇತರೆ ಕೈದಿಗಳು ಹಲ್ಲೆ ನಡೆಸಿರುವ ಆರೋಪ ಎದುರಾಗಿತ್ತು. ಆದ್ದರಿಂದ ಪ್ರಕರಣ ಎಲ್ಲ ಆರೋಪಿಗಳನ್ನು ಒಂದೇ ಜೈಲಿನಲ್ಲಿಡುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೊರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications