Bengaluru Rain: ಬೆಂಗಳೂರು ನಗರದಲ್ಲಿ ಸಂಜೆ ಮಳೆ, ರಸ್ತೆಗಳು ಜಲಾವೃತ
ಬೆಂಗಳೂರು, ಮೇ 03; ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಜೆ ಮಳೆ ಸುರಿದಿದೆ. ಸುಮಾರು ಅರ್ಧಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ. ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದರು.
ಮಂಗಳವಾರ ಸಂಜೆ ಶಾಂತಿ ನಗರ, ಕಾರ್ಪೋರೇಷನ್ ಸರ್ಕಲ್, ಮೈಸೂರು ರಸ್ತೆ, ವಿಧಾನಸೌಧ, ಶಿವಾಜಿನಗರ, ಕಾಡುಗೋಡಿ, ಹೆಬ್ಬಾಳ, ಕೋರಮಂಗಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.
ಅಕ್ಷಯ ತೃತೀಯ ಮತ್ತು ರಂಜಾನ್ ಹಬ್ಬದ ಹಿನ್ನಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಆದರೂ ಸಹ ವಾಹನ ಸವಾರರು ರಸ್ತೆಗಳು ಜಲಾವೃತವಾಗಿದ್ದರಿಂದ ಪರದಾಡಿದರು.

ಭಾನುವಾರ ನಗರದಲ್ಲಿ ಭಾರೀ ಮಳೆಯಾಗಿತ್ತು. ತಾಪಮಾನ ಏರಿಕೆಯಿಂದಾಗಿ ಕಂಗೆಟ್ಟಿದ್ದ ಜನರು ಮಳೆಯಿಂದ ಸಂತಸಗೊಂಡಿದ್ದರು. ಸೋಮವಾರ ನಗರದಲ್ಲಿ ಮಳೆಯಾಗಿರಲಿಲ್ಲ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೇ 5ರ ತನಕ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆ ಮುಂದುವರೆಯಲಿದೆ. ಬೆಂಗಳೂರು ನಗರದಲ್ಲಿ 5 ರ ಬಳಿಕ ಮಳೆ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications