Bengaluru Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವರುಣನ ಅರ್ಭಟಕ್ಕೆ ರಸ್ತೆಗಳು ಜಲಾವೃತ!
ಬೆಂಗಳೂರು ಜುಲೈ 31: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವರುಣನ ಅರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿವೆ. ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ತುಂತುರು ಮಳೆ ಶುರುವಾಗಿತ್ತು.
ಸಂಜೆ 5ರ ನಂತರ ವರುಣನ ಅರ್ಭಟ ಜೋರಾಗಿದ್ದು ಕೆಲಸ ಕಾರ್ಯಕ್ಕೆ ತೆರಳಿದ್ದ ಜನ ರಸ್ತೆಗಿಳಿಯದಂತೆ ಮಾಡಿದೆ. ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸಂಚಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರದ ವಿಜಯನಗರ, ಕೆಆರ್ ಮಾರುಕಟ್ಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಜಾಲಹಳ್ಳಿ ಹೀಗೆ ಹಲವೆಡೆ ಧಾರಾಕಾರ ಮಳೆ ಬೀಳುತ್ತಿದೆ.

ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮಳೆರಾಯ ಅಡೆಚಣೆ ಉಂಟು ಮಾಡಿದ್ದು ಮೆಟ್ರೋ ಪಿಲ್ಲರ್ ಹಾಗೂ ಅಂಗಡಿ ಮುಗ್ಗಟ್ಟುಗಳ ಆಶ್ರಯವನ್ನು ಪಡೆದು ಸವಾರರು ನಿಂತಿರುವ ದೃಶ್ಯಗಳು ಕಂಡು ಬಂದಿವೆ. ಅರ್ಧ ಗಂಟೆಯಿಂದ ಅಧಿಕ ಮಳೆ ಬೀಳುತ್ತಿದ್ದು ರಸ್ತೆಯಲ್ಲಿ ಗುಂಡಿಗಳು ಕಾಣದೆ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ರಾಜ್ಯದ ಹಲವೆಡೆ ಇಂದು ಅಧಿಕ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿತ್ತು. ಅಂತೆಯೇ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್ ಕಡಿತಗೊಳಿಸಲಾಗಿದೆ.
ಭಾರೀ ಮಳೆ ಬೆನ್ನಲ್ಲೆ ಬಜ್ಜಿ ಬೋಂಡಾಕ್ಕೆ ಹೆಚ್ಚಿದ ಬೇಡಿಕೆ
ನಗರದಲ್ಲಿ ಮಳೆ ಬಿದ್ದರೆ ಸಾಕು ವಾತಾವರಣ ಬದಲಾಗಿ ಹೋಗುತ್ತದೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ದಿನಕ್ಕೊಂದು ಬಾರಿ ಮಳೆ ಬೀಳುತ್ತಲೇ ಇದೆ. ಹೀಗಾಗಿ ಬಜ್ಜಿ ಬೊಂಡಾ ಅಂಗಡಿಗಳಲ್ಲಿ ಜನ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ರಸ್ತೆ ಬದಿ ಹಾಗೂ ಸಣ್ಣ ಪುಟ್ಟ ಅಂಗಡಿ ಹೋಟೆಲ್‌ಗಳಲ್ಲಿ ತಯಾರಾಗುವ ಮೆಣಸಿನಕಾಯಿ ಬಜ್ಜಿ, ಬೋಂಡಾಕ್ಕೆ ಬೇಡಿಕೆ ಹೆಚ್ಚಾಗಿದೆ.

ಕಾಫಿ ಟೀ ಅಂಗಡಿಗಳ ಮುಂದೆನೂ ಜನ
ಇನ್ನೂ ಮಳೆಗೆ ಚಳಿ ಹೆಚ್ಚಾಗುತ್ತಿದ್ದಂತೆ ಜನ ಟೀ ಕಾಫಿ ಅಂಗಡಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಟಿ ಕಾಫಿ ಅಂಗಡಿಗಳ ಮುಂದೆ ಜನ ಸೇರಲು ಆರಂಭಿಸುತ್ತಾರೆ. ಬಿಸಿ ಬಿಸಿ ಚಹಾ ಕುಡಿಯುತ್ತಾ ಮಳೆಯನ್ನು ಆನಂದಿಸುತ್ತಾರೆ. ಅಲ್ಲದೆ ಟೀ ಕಾಫಿ ಜೊತೆಗೆ ಕೆಲ ಸ್ನ್ಯಾಕ್ಸ್ ಗೂ ಕೂಡ ಈ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಸಂಜೆ ಮಳೆ ಹಲವೆಡೆ ಕಿರಿಕಿರಿ ತಂದಿದ್ದರೂ, ಕಳೆದ ಕೆಲ ದಿನಗಳಿಂದಲೂ ಇಷ್ಟೊಂದು ಜೋರು ಮಳೆ ಬಿದ್ದೇ ಇಲ್ಲ ಅಂತ ಕೆಲ ಜನ ಮಳೆಯನ್ನು ಆನಂದಿಸುತ್ತಿದ್ದಾರೆ.












Click it and Unblock the Notifications