ಬೆಂಗಳೂರು ಕೆರೆ ನೀರು ಬಳಕೆ ಮಾಡಿ ಬೆಳೆದ ಬೆಳೆಗಳಲ್ಲಿ ಲೋಹದ ಅಂಶ ಪತ್ತೆ
ಬೆಂಗಳೂರು,ಜನವರಿ 25: ಬೆಂಗಳೂರಿನ ವಿವಿಧೆಡೆ ಇರುವ ಕೆರೆ ನೀರನ್ನು ಬಳಕೆ ಮಾಡಿ ಬೆಳೆದ ಬೆಳಗಳಲ್ಲಿ ಲೋಹದ ಅಂಶ ಪತ್ತೆಯಾಗಿರುವುದು ಎಲ್ಲರನ್ನೂ ಆತಂಕಕ್ಕೆ ತಳ್ಳಿದೆ.
ಇಷ್ಟು ದಿನ ಕಣ್ಮುಚ್ಚಿಕೊಂದು, ಕೇವಲ ತರಕಾರಿ ಕೊಳೆತಿದೆಯೋ ಇಲ್ಲವೂ ಎಂದಷ್ಟೇ ನೋಡಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರು, ಈಗ ಲೋಹದ ಅಂಶ ಪತ್ತೆ ಹಚ್ಚುವುದಾದರೂ ಹೇಗೆ ಎಂದು ತಲೆಯ ಮೇಲೆ ಕೈಹೊತ್ತು ಕೂತಿದ್ದಾರೆ. ಹಾಗಾದರೆ ನಾವು ಇಷ್ಟು ದಿನ ತಿನ್ನುತ್ತಿದ್ದ ಆಹಾರದಲ್ಲಿ ಲೋಹವಿತ್ತೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಪೂರೈಕೆ ಕೊರತೆ: ಬೆಂಗಳೂರಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ
ಬೆಂಗಳೂರು ಸುತ್ತಮುತ್ತಲ ಭಾಗದಲ್ಲಿ ಕೆರೆ ನೀರು ಬಳಕೆ ಮಾಡಿ ಬೆಳೆದ ಬೆಳೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಸೊಪ್ಪು, ಟೊಮೆಟೊ, ಭತ್ತ ಹಾಗೂ ಬೀಟ್ರೂಟ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದ ಭಾರ ಲೋಹದ ಅಂಶ ಕಂಡುಬಂದಿದೆ.

ಸೊಪ್ಪಿನಲ್ಲಿರುವ ಲೋಹದ ಅಂಶಗಳು ಯಾವುವು?
ಕ್ರೋಮಿಯಂ, ಕ್ಯಾಡ್ಮಿಯಮ್ ಮತ್ತು ನಿಕ್ಕಲ್ ಲೋಹಗಳು ತರಕಾರಿ ಹಾಗೂ ಸೊಪ್ಪಿನಲ್ಲಿ ಇರುವ ವಿಚಾರ ತಿಳಿದುಬಂದಿದೆ. ಈ ರೈತರು ತಮ್ಮ ಬೆಳೆಗೆ ಕೆರೆ ನೀರನ್ನು ಬಳಕೆ ಮಾಡಿಕೊಂಡಿದ್ದಾರೆ. ಭೂಮಿಯನ್ನು ಫಲವತ್ತಾಗಿಸಲು ಸರೋವರದ ಕೆಸರನ್ನು ಕೂಡ ಸೇರಿಸಿದ್ದಾರೆ. ಕೆರೆ ನೀರು ಈಗಾಗಲೇ ಕಲುಷಿತಗೊಂಡಿದೆ. ಅದೇ ನೀರನ್ನು ಬಳಕೆ ಮಾಡಿದ್ದರಿಂದ ಇದು ಗಿಡಗಳಿಗೂ ಸೇರಿದೆ.

ಹಸುವಿನ ಹಾಲು ಕಲುಷಿತ
ಅಪಾಯಕಾರಿ ಲೋಹಗಳಿರುವ ತರಕಾರಿ ಹಾಗೂ ಹುಲ್ಲನ್ನು ಸೇವನೆ ಮಾಡುವ ಹಸುಗಳಿಗೆ ಇದರ ಅಪಾಯ ತಪ್ಪಿದ್ದಲ್ಲ, ಅಷ್ಟೇ ಅಲ್ಲ ಆಕಳಿನ ಹಾಲಿನಲ್ಲೂ ವಿಷಕಾರಿ ಅಂಶ ಸೇರಿಸುವ ಸಾಧ್ಯತೆ ಇರುತ್ತದೆ. ಇದನ್ನು ಸೇವನೆ ಮಾಡಿದ ಮನುಷ್ಯನಿಗೆ ಅಪಾಯ ಎದುರಾಗಬಹುದು.

ಗಡ್ಡೆ, ಗೆಣಸುಗಳ ಮೇಲೂ ಪರಿಣಾಮ
ಇನ್ನು, ಗಡ್ಡೆ-ಗೆಣಸಿಗಿಂತಲೂ ಭೂ ಮೇಲ್ಮೈನಲ್ಲಿ ಬೆಳೆಯುವ ಟೊಮೆಟೊ ಇತ್ಯಾದಿ ತರಕಾರಿಗಳಲ್ಲಿ ಹೆಚ್ಚು ಭಾರ ಲೋಹ ಕಂಡುಬಂದಿದೆ. ವಾತಾವರಣ ಕಲುಷಿತಗೊಂಡಿದ್ದು,ಇದು ತರಕಾರಿ ಮೇಲ್ಮೈ ಸೇರಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಯಾವ ಪ್ರದೇಶದ ಕೆರೆಗಳಲ್ಲಿ ತೊಂದರೆ
ಮಾರಗೊಂಡನಹಳ್ಳಿ, ಹೊಸಕೋಟೆ,ಜಿಗಣಿ, ವರ್ತೂರು ಭಾಗದಲ್ಲಿರುವ ಕೆರೆ ನೀರು ಬಳಕೆ ಮಾಡಿ ಬೆಳೆದ ಬೆಳೆಗಳಲ್ಲಿ ಈ ಅಪಾಯಕಾರಿ ಅಂಶ ಕಾಣಿಸಿಕೊಂಡಿದೆ. ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ಮಾರಕ ರೋಗಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 2017ರಲ್ಲೂ ತಜ್ಞರು ಇದೇ ಮಾದರಿಯ ಎಚ್ಚರಿಕೆ ನೀಡಿದ್ದರು.