ಗಮನಿಸಿ: ಬೆಂಗಳೂರಿಗೆ ಬರುವ 'ತರಕಾರಿ'ಗಳಲ್ಲಿ ಅನಾರೋಗ್ಯಕರ ಅಂಶಗಳು ಪತ್ತೆ: EMPRI
ಬೆಂಗಳೂರು, ಅಕ್ಟೋಬರ್ 25: ಆರೋಗ್ಯ ತರಕಾರಿಗಳ ಸೇವನೆ, ಅದರಲ್ಲೂ ಹಸಿ ತರಕಾರಿಗಳ ಸೇವನೆ ಉತ್ತಮ ಎಂಬ ಮಾತಿಗೆ. ಆದರೆ ಸಂಶೋಧನೆಯೊಂದರಿಂದ ತಿಳಿದು ಬಂದ ಮಾಹಿತಿ ಪ್ರಕಾರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ತರಕಾರಿಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆ ಇವೆ ಎಂಬದು ಗೊತ್ತಾಗಿದೆ. ಈ ಸಂಬಂಧ ತರಕಾರಿಗಳ ಮಾದರಿ ಸಂಗ್ರಹಿಸಿ ಸಂಶೋಧಿಸಲಾಗಿದೆ. ತರಕಾರಿಯಿಂದ ಏಕೆ ಅನಾರೋಗ್ಯ ಉಂಟಾಗುತ್ತದೆ ಎಂದು ಮುಂದೆ ತಿಳಿಯೋಣ.
ತರಕಾರಿಗಳನ್ನು ಬೆಳೆಯಲು ತ್ಯಾಜ್ಯನೀರಿನ ಬಳಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ತ್ಯಾಜ್ಯ ನೀರಿನ ಬಳಕೆಯಿಂದ ತರಕಾರಿಗಳಲ್ಲಿ ಕಬ್ಬಿಣಾಂಶ, ಕ್ಯಾಡ್ಮಿಯಮ್ ಅಂಶಗಳ ಸಾಂಧ್ರತೆ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿವೆ ಎಂದು 'ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ' (EMPRI) ಸಂಶೋಧಕರು ತಿಳಿಸಿದ್ದಾರೆ.

ಸಂಸ್ಥೆಯ ಸಂಶೋಧನೆಗಾಗಿ 10 ತರಕಾರಿಗಳ 400 ಮಾದರಿಗಳನ್ನು ಪರೀಕ್ಷಿಸಿಲಾಗಿದೆ. ಇದರಿಂದ ಆಹಾರ ಮತ್ತು ಕೃಷಿ ಸಂಸ್ಥೆ (FAO) ನಿಗದಿಪಡಿಸಿದ ಅನುಮತಿಸುವ ಮಿತಿಗಳಿಗಿಂತ ಹೆಚ್ಚಿನ ಮಾಲಿನ್ಯ ಈ ತರಕಾರಿಗಳಲ್ಲಿ ಪತ್ತೆ ಆಗಿದೆ ಎಂದು 'ಡಿಎಚ್' ವರದಿ ಮಾಡಿದೆ.
ಕರ್ನಾಟಕ ರಾಜ್ಯದ ಐದನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ತರಕಾರಿಗಳನ್ನು ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದ ಹೊರ ಪ್ರದೇಶಗಳ ರೈತರಿಂದ ಪಡೆಯುತ್ತಿದೆ.

200 ಮಳಿಗೆಗಳ 400 ಮಾದರಿ ಸಂಗ್ರಹ
ಇನ್ನೂ ಬೆಂಗಳೂರು ಜನರಿಗೆ ಹಾಪ್‌ಕಾಮ್ಸ್ ಮಾತ್ರವೇ 70 ಟನ್ ತರಕಾರಿಗಳನ್ನು ಪೂರೈಕೆ ಮಾಡುತ್ತದೆ. ಉಳಿದಂತೆ ಬಹುತೇಕ ಮಂದಿ ಮಾರುಕಟ್ಟೆ, ತಳ್ಳುಗಾಡಿ, ಸೂಪರ್ ಮಾರುಕಟ್ಟೆಯಂತಹ ಖಾಸಗಿ ತರಕಾರಿ ವ್ಯಾಪಾರಿಗಳನ್ನೇ ಅವಲಂಬಿಸಿದ್ದಾರೆ.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ' (EMPRI) ಸಂಶೋಧಕರು ಬೆಂಗಳೂರಿನಾದ್ಯಂತ 20 ಮಳಿಗೆಗಳಿಂದ ಸುಮಾರು 400 ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆಗೆ ಒಳಪಡಿಸಿದ್ದಾರೆ. ಐದು ಉನ್ನತ ಮಟ್ಟದ ಸೂಪರ್ ರ್ಮಾರ್ಕೆಟ್‌ಗಳು, ಐದು ಸ್ಥಳೀಯ ಮಾರುಕಟ್ಟೆ, ಸಾವಯವ ಮಳಿಗೆಗಳು ಮತ್ತು ಹಾಪ್‌ಕಾಮ್ಸ್ ಗಳಲ್ಲಿ ಸಂಶೋಧಕರು, ಬದನೆಕಾಯಿ, ಬೀನ್ಸ್, ಟೊಮೆಟೊ, ಕ್ಯಾಪ್ಸಿಕಂ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಪಾಲಕ, ಹಸಿರು ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೇರಿದಂತೆ ಒಟ್ಟು ಹತ್ತು ತರಕಾರಿಗಳ ಮಾದರಿಗಳನ್ನು ಭಾರೀ ಲೋಹಗಳ ಸಾಂಧ್ರತೆ (Heavy metals) ಪರೀಕ್ಷೆಗೆ ಒಳಪಡಿಸಿದ್ದಾರೆ.
ತರಕಾರಿಗಳಲ್ಲಿ ಹೇರಳವಾಗಿದೆ ಕಬ್ಬಿಣಾಂಶ
ಐರನ್ ಕಂಟೆಂಟ್ (ಕಬ್ಬಿಣಾಂಶ) ಗರಿಷ್ಠ ಪ್ರಮಾಣದ ಮಿತಿ ಒಂದು ಕೇಜಿಗೆ 425.5 ಮಿಲಿಗ್ರಾಂ ಇರಬೇಕು. ಆದರೆ ಸಾವಯವ ಅಂಗಡಿಗಳಿಂದ ಖರೀದಿಸಿದ ಬೀನ್ಸ್ ನಲ್ಲಿ ಅದರ ಪ್ರಮಾಣ ಒಂದು ಕೇಜಿಗೆ 810.20 ಮಿಲಿಗ್ರಾಂ ನಷ್ಟಿತ್ತು. ಇನ್ನು ಕೊತ್ತಂಬರಿ ಕೇಜಿಗೆ 945.70 ಮಿಲಿಗ್ರಾಂ ಮತ್ತು ಪಾಲಕ್ ಸೊಪ್ಪಿನಲ್ಲಿ ಕೇಜಿಗೆ 554.58 ಮಿಲಿಗ್ರಾಂ ಸಾಂದ್ರತೆ ಇರುವುದು ಪತ್ತೆ ಆಗಿದೆ. ಇನ್ನೂ ಹಾಪ್‌ಕಾಮ್ಸ್‌ನ ತರಕಾರಿಗಳ ಪೈಕಿ ಈರುಳ್ಳಿ 592.18 ಮಿಗ್ರಾಂ/ಕೆಜಿ ಕಬ್ಬಿಣಾಂಶ ವನ್ನು ಹೊಂದಿದೆ.
ಮಿತಿ ಮೀರಿದ ಕ್ಯಾಡ್ಮಿಯಮ್ ಪ್ರಮಾಣ
ಸೂಪರ್ ಮಾರುಕಟ್ಟೆಗಳು ಇಲ್ಲವೇ ಸಣ್ಣ ಚಿಲ್ಲರೆ ಮಳಿಗೆಗಳ ತರಕಾರಿಗಳಲ್ಲಿ ಈ ಕಬ್ಬಿಣಾಂಶ, ಕ್ಯಾಡ್ಮಿಯಮ್ ಅಂಶಗಳ ಮೀತಿ ಮೀರಿದೆ. FAO ಪ್ರಕಾರ ಒಂದು ಕೇಜಿಗೆ 0.2 ಮಿಲಿಗ್ರಾಂ ಕ್ಯಾಡ್ಮಿಯಮ್ ಗರಿಷ್ಠ ಮಿತಿಲ್ಲಿ ಇರಬೇಕಿದೆ. ಆದರೆ ಬಿಟಿಎಂ ಲೇಔಟ್‌ನಲ್ಲಿರುವ ಸೂಪರ್ ಮಾರ್ಕೆಟ್ ನಲ್ಲಿ ಖರೀದಿಸಿದ ಕೊತ್ತಂಬರಿಯಲ್ಲಿ 53.30 ಮಿಲಿಗ್ರಾಂ, ಪಾಲಕ್ ಸೊಪ್ಪಿನಲ್ಲಿ 53.50 ಮಿಲಿಗ್ರಾಂ ಹಗಾಗೂ ಕ್ಯಾರೆಟ್ 54.60 ಮಿಲಿಗ್ರಾಂ, ಕೇಜಿ ಬದನೆಕಾಯಿಯಲ್ಲಿ ಕ್ಯಾಡ್ಮಿಯಮ್ 52.30 ಮಿಗ್ರಾಂ/ಕೆಜಿ ಕ್ಯಾಡ್ಮಿಯಮ್ ಪತ್ತೆ ಆಗಿದೆ.
ಕ್ಯಾಡ್ಮಿಯಮ್ ಅಪಾಯಕಾರಿ ಅಂಶವಾಗಿದ್ದು ಅದು ಯಕೃತ್ತು ಮತ್ತು ಶ್ವಾಸಕೋಶದಲ್ಲಿ ವಿಷತ್ವವನ್ನು ಉಂಟುಮಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಸೀಸ ಸಂಪೂರ್ಣವಾಗಿ ವಿಷಕಾರಿ ಎನ್ನುವ ಸಂಶೋಧಕರು, ಅದರ ಗರಿಷ್ಠ ಮಿತಿ 0.3 ಮಿಲಿ ಗ್ರಾಂ ಮೀರಬಾರದು ಎಂದು ತಿಳಿಸಿದ್ದಾರೆ.
ತರಕಾರಿ ಬೆಳೆಗೆ ತ್ಯಾಜ್ಯ ನೀರು ಬಳಕೆಯಿಂದ ಅನಾರೋಗ್ಯ
ಸೂಪರ್ ಮಾರುಕಟ್ಟೆಯ ಬೀನ್ಸ್ ಕೇಜಿಗೆ 12.20 ಮಿಲಿಗ್ರಾಂ ಪ್ರತಿದಿನ ತರಕಾರಿ ಸೇವಿಸುವ ಜನರ ಆರೋಗ್ಯದ ಮೇಲೆ ಕಳವಳ ಮೂಡಿಸಿದೆ. ಇನ್ನು ಹಸಿರು ಮೆಣಸಿನಕಾಯಿ, ಟೊಮೆಟೊ, ಕ್ಯಾರೆಟ್, ಆಲೂಗಡ್ಡೆ ಮತ್ತು ಬೀನ್ಸ್‌ಗಳಲ್ಲಿ ನಿಕಲ್‌ನ ಸಾಂದ್ರತೆಯು ಗರಿಷ್ಠ 67.9 ಮಿಲಿಗ್ರಾಂ ಮಿತಿಗಿಂತಲೂ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ತರಕಾರಿಗಳ ನಿರಂತರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಲಿವೆ. ಕೃಷಿಗೆ ತ್ಯಾಜ್ಯ ನೀರನ್ನು ಮೂಲವಾಗಿ ಬಳಸಬಾರದು ಎಂದು ಸೂಚಿಸಲಾಗಿದೆ. ಜೊತೆಗೆ ರೈತರು ಒಳಚರಂಡಿ ಇನ್ನಿತರ ತ್ಯಾಜ್ಯ ಮೂಲಗಳಿಂದ ಹರಿದು ಬರುವ ನೀರನ್ನು ಬಳಸದಂತೆ ತಿಳಿಸಲಾಗಿದೆ.












Click it and Unblock the Notifications