ಸುರಕ್ಷತಾ ಕ್ರಮ ಅನುಸರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು, ಸೆ. 4 : ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರು ತಿಳಿಸಿರುವ ಸೂಚನೆಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲಾಗುವುದು ಎಂದು ಹೈಕೋರ್ಟ್ ಗುರುವಾರ ಎಚ್ಚರಿಕೆ ನೀಡಿದೆ.
ಈ ಕೂಡಲೇ ರಾಜ್ಯ ಸರ್ಕಾರ ಮತ್ತು ಪೊಲೀಸ್ ಆಯುಕ್ತರು ಈ ಬಗ್ಗೆ ಗಮನ ಹರಿಸಬೇಕು. ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಬೇಕು. ಅಲ್ಲದೇ ಈ ಸಮಿತಿ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ಅಭ್ಯಸಿಸಿ ಶಾಲಾ ಸಮಿತಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಧೀಶ ಎ.ಎನ್.ವೇಣುಗೋಪಾಲ್ ಗೌಡ ಆದೇಶದಲ್ಲಿ ತಿಳಿಸಿದ್ದಾರೆ.

ಶಾಲಾ ಸಮಿತಿಗಳೊಂದಿಗೆ ಸಭೆ ನಡೆಸಲು ಯಾಕೆ ಪೊಲೀಸ್ ಇಲಾಖೆ ವಿಫಲವಾಗಿದೆ. ಸಲಹೆ-ಸೂಚನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ.ಈ ಕುರಿತು ಪೊಲೀಸ್ ಇಲಾಖೆ ಗಮನ ಹರಿಸಿ ಎಲ್ಲ ಸೂಚನೆಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ.
ಎಲ್ಲ ಶಿಕ್ಷಣ ಸಂಸ್ಥೆಗಳ ಸಮೀಕ್ಷೆ ನಡೆಸಿ ಮಾರ್ಗದರ್ಶಿ ಸೂತ್ರಗಳು ಅನುಷ್ಠಾನವಾಗಿದೆಯೋ, ಇಲ್ಲವೋ ಎಂಬುದನ್ನು ಸೆಪ್ಟಂಬರ್ 16ರೊಳಗೆ ವರದಿ ನೀಡಬೇಕು. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ಮೇಲೆ ಕಾನೂನು ಕ್ರಮ ತಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಆದರೆ ಸೂತ್ರಗಳ ಅನುಷ್ಠಾನಕ್ಕೆ ಸಂಬಂಧಿಸಿ ಹಣಕಾಸು ಕೊರತೆ ಮತ್ತಿತರ ಸಮಸ್ಯೆಗಳು ಎದುರಾಗಿವೆ ಎಂದು ಶಾಲಾ ಸಮಿತಿಗಳು ತಿಳಿಸಿವೆ. ಎನೇ ಇದ್ದರೂ ಸೆಪ್ಟೆಂಬರ್ 15ರೊಳಗೆ ಯೋಜನೆ ಕಾರ್ಯಗತವಾಗಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ಮಾಡಿದೆ.












Click it and Unblock the Notifications