ಭೂ ಪರಭಾರೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು,ಜನವರಿ 29: ಎಸ್‌ಟಿಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಎಸ್‌ಸಿಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆಯಲ್ಲಿನ (ಪಿಟಿಸಿಎಲ್) ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಭೂಹೀನರನ್ನಾಗಿ ಮಾಡುವುದನ್ನು ತಡೆಯಲು ಜಾರಿಗೆ ತಂದ ಎಸ್‌ಸಿಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆ ಇಷ್ಟು ದಿನ ಇದ್ದೂ ಇಲ್ಲದಂತಾಗಿತ್ತು. ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿ ಎಂಬ ಸುಪ್ರೀಂಕೋರ್ಟ್ ಆದೇಶದ ನಂತರ ರಾಜ್ಯದ ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ವಜಾಗೊಂಡಿತ್ತು.

1924ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಭೂ ಒಡೆತನದ ಹಕ್ಕನ್ನು ಮೈಸೂರು ಅರಸರು ಕೊಟ್ಟರು. ಸ್ವಾತಂತ್ರ್ಯ ಬರುವ ಮೊದಲು ರಾಜರು, ಸ್ವಾತಂತ್ರ್ಯ ನಂತರ ಸರ್ಕಾರಗಳು ಮುಫ್ತಾಗಿ ನೀಡಿದ ಭೂಮಿಯನ್ನು ನಿರ್ದಿಷ್ಟ ಕಾಲದವರೆಗೆ ಪರಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸುತ್ತಿದ್ದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಮಂಜೂರು ಮಾಡಿರುವ ಭೂಮಿಯನ್ನು ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೆ ವರ್ಗಾವಣೆ ಮಾಡುವುದನ್ನು ಕಾಯ್ದೆಯ ಸೆಕ್ಷನ್ 6ರಲ್ಲಿ ನಿರ್ಬಂಧಿಸಲಾಗಿದೆ. ಈ ಸೆಕ್ಷನ್ ಅನುಷ್ಠಾನಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪೀಠ ಹೇಳಿದೆ
ತುಮಕೂರಿನ ಬಿ. ದಾಸಪ್ಪ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.












Click it and Unblock the Notifications