ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಆಗ್ರಹಿಸಿ ಸಮಾಜ ಕಲ್ಯಾಣ ಸಚಿವರಿಗೆ ಪತ್ರ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಮಸ್ಯೆಯ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಕ್ಕೆ ಪೂರಕವಾದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಅವರಿಗೆ ವಿದ್ಯಾರ್ಥಿ ವೇತನವನ್ನು ಈ ಹಿಂದಿನ ಎಲ್ಲಾ ಸರ್ಕಾರಗಳೂ ಕೂಡಾ ಪಕ್ಷಾತೀತವಾಗಿ ಮಾಡುತ್ತಾ ಬಂದಿವೆ.
ಪ್ರಸ್ತುತ ಸರ್ಕಾರದ ಅವಧಿಯಲ್ಲಿ ರಾಜ್ಯದೊಳಗೆ ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ವಿದ್ಯಾರ್ಥಿ ವೇತನವನ್ನು ನೀಡಬೇಕಿದ್ದ ಸರ್ಕಾರವು ಅದನ್ನು ತಡೆಯುವ ಮತ್ತು ಅರ್ಧಂಬರ್ಧ ವಿದ್ಯಾರ್ಥಿ ವೇತನ ನೀಡಿ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡುವಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಖಂಡನೀಯವಾದ ಸಂಗತಿಯಾಗಿದೆ.

ಸಾಮಾಜಿಕ ನ್ಯಾಯವನ್ನು ಗಮನದಲ್ಲಿ ಇಟ್ಟುಕೊಂಡು ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದ ವಿಷಯದಲ್ಲಿ ಸರ್ಕಾರವು ನಡೆದುಕೊಳ್ಳುತ್ತಿರುವ ರೀತಿಯಿಂದ ಬಹುತೇಕ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದು, ಶಿಕ್ಷಣವನ್ನು ಮುಂದುವರೆಸಲಾಗದ ಆತಂಕವನ್ನು ಎದುರಿಸುತ್ತಿದ್ದಾರೆ.
2019-20ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗಬೇಕಿದ್ದ ಒಟ್ಟು 2,72,51,800 ರೂ.ಗಳಲ್ಲಿ ಕೇವಲ 84,18,179 ರೂ.ಗಳನ್ನು ಬಿಡುಗಡೆ ಮಾಡಿ 1,88,33,621 ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.
ಅದೇ ರೀತಿ ಸ್ನಾತಕೋತ್ತರ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗಬೇಕಿದ್ದ ಒಟ್ಟು 5,02,400 ರೂ.ಗಳಲ್ಲಿ ಕೇವಲ 1,47,360 ರೂ.ಗಳನ್ನು ಬಿಡಗಡೆ ಮಾಡಿ 3,55,040 ರೂ.ಗಳನ್ನು ಬಾಕಿ ಇರಿಸಿಕೊಂಡಿದೆ.
ಅದೇ ರೀತಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಮುಖ ಘಟಕ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಒಟ್ಟು 1777 ವಿದ್ಯಾರ್ಥಿಗಳಲ್ಲಿ ಕೇವಲ 1502 ವಿದ್ಯಾರ್ಥಿಗಳಿಗೆ ಮಾತ್ರ 42,54,538 ರೂ.ಗಳನ್ನು ಬಿಡುಗಡೆಗೊಳಿಸಿ ಒಟ್ಟು 1,11,52,822 ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.

275 ವಿದ್ಯಾರ್ಥಿಗಳಿಗೆ ಒಂದು ರೂಪಾಯಿಯನ್ನೂ ಸಹ ಬಿಡುಗಡೆಗೊಳಿಸದೇ 30,77,250 ರೂ.ಗಳನ್ನು ಬಾಕಿ ಇರಿಸಿಕೊಂಡು ಒಟ್ಟಾರೆ 1,42,30,072 ರೂ.ಗಳನ್ನು ಸಕಾಲದಲ್ಲಿ ನೀಡದೇ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ವಂಚನೆ ಮಾಡಲಾಗಿದೆ.
ಅದೇ ರೀತಿ ವಿಶ್ವವಿದ್ಯಾನಿಲಯದ ಮತ್ತೊಂದು ಘಟಕ ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 681 ವಿದ್ಯಾರ್ಥಿಗಳಿಗೆ ಒಟ್ಟು 1,96,79,080 ರೂ.ಗಳು ಬಿಡುಗಡೆಯಾಗಬೇಕಿದ್ದು. ಅದರಲ್ಲಿ ಕೇವಲ 33,74,027 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿ ಉಳಿದ 1,63,05,053 ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.
ಇದು 2019-20ನೇ ಸಾಲಿಗೆ ಸಂಬಂಧಿಸಿದ ದತ್ತಾಂಶವಾಗಿದ್ದರೆ, ಇನ್ನು 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡದೇ ಕೋಟ್ಯಂತರ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.

ಮೈಸೂರು ವಿಶ್ವವಿದ್ಯಾನಿಲಯವೊಂದರ ಸ್ನಾತಕೋತ್ತರ, ಮಾನಸಗಂಗೋತ್ರಿ ಕೇಂದ್ರ ಮತ್ತು ಘಟಕ ಕಾಲೇಜುಗಳಾದ ಮಹಾರಾಜ ಹಾಗೂ ಯುವರಾಜ ಕಾಲೇಜುಗಳ ಅಂಕಿ ಅಂಶಗಳಾದರೆ, ಇದೇ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯೊಂದರಲ್ಲಿಯೇ 250ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದ್ದು, ಇವೆಲ್ಲದರ ಪರಿಸ್ಥಿತಿಯು ಒಂದೇ ಆಗಿದೆ.
ಇನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳನ್ನು ವಿಚಾರಿಸಲಾಗಿ, ಹೆಚ್ಚು ಕಡಿಮೆ ಅವರೆಲ್ಲರ ಪರಿಸ್ಥಿತಿಯೂ ಕೂಡಾ ಇದೇ ಆಗಿದ್ದು, ಸರ್ಕಾರದ ಬೇಜವಾಬ್ದಾರಿ ಮನಸ್ಥಿತಿಯಿಂದಾಗಿ ವಿದ್ಯಾರ್ಥಿಗಳಿಗೆ ಮೂಲ ದಾಖಲೆಗಳೂ ಸಹ ಲಭಿಸದಂತಹ ಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಮೂಲ ದಾಖಲೆಗಳು ಬೇಕಿದ್ದಲ್ಲಿ ವಿದ್ಯಾರ್ಥಿಗಳೇ ವಿದ್ಯಾರ್ಥಿವೇತನ ಭರಿಸಬೇಕೆಂದು ಕಾಲೇಜಿನವರು ಒತ್ತಾಯಿಸುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಇತ್ತ ಹಣ ಕಟ್ಟಲು ಆಗದೇ ಅತ್ತ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಮೂಲ ದಾಖಲಾತಿಗಳಿಲ್ಲದೇ ವಿವಿಧ ಸ್ಪರ್ಧಾತ್ಮಕ ಉದ್ಯೋಗಗಳಿಗೆ ಆಯ್ಕೆಯಾದರೂ ಅವರು ಸಂದರ್ಶನಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನಲೆಯಲ್ಲಿ ಸರ್ಕಾರವು ಆದಷ್ಟು ಬೇಗವೇ ವಿದ್ಯಾರ್ಥಿಗಳಿಗೆ ಬಾಕಿ ಉಳಿಸಿಕೊಂಡ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿ ಅವರ ಶೈಕ್ಷಣಿಕ ಬದುಕಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಮತ್ತು ವಿದ್ಯಾರ್ಥಿ ವೇತನದ ವಿಷಯದಲ್ಲಿ ಉಂಟಾಗಿರುವ ಗೊಂದಲಗಳನ್ನು ತುರ್ತಾಗಿ ಪರಿಹರಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.
"ಶಿಕ್ಷಣವೇ ಸಮಾಜವನ್ನು ರೂಪಿಸುವ ಆತ್ಮಶಕ್ತಿ" ಎಂಬ ಮಹತ್ತರ ಸಂಗತಿಯನ್ನು ನಾವು ಮರೆಯದಿರೋಣ ಎಂದು ಮಾಜಿ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸುದೀರ್ಘ ಪತ್ರ ಬರೆದು ಒತ್ತಾಯಿಸಿದ್ದಾರೆ.












Click it and Unblock the Notifications