ಬಿಬಿಎಂಪಿ ವ್ಯಾಪ್ತಿಯಲ್ಲಿರುವ ತ್ಯಾಜ್ಯ ಸಾಗಿಸಲು ಕೆಸಿಡಿಸಿ ನಿಗಮಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಮೇ 28: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗಿರುವ 10 ಸಾವಿರ ಟನ್ ಕಸವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸುವಂತೆ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ನಗರದ ಕಸ ನಿರ್ವಹಣೆ ಸಂಬಂಧ ಸಲ್ಲಿಕೆಯಾಗಿರುವ ಪಿಐಎಲ್‌ಗಳ ವಿಚಾರಣೆ ವೇಳೆ, ಕೂಡ್ಲುಗೇಟ್ ಬಳಿಯ ಕೆಸಿಡಿಸಿ ಘಟಕವನ್ನು ಮುಚ್ಚುವಂತೆ ಸ್ಥಳಿಯರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಕುರಿತು ಆದೇಶಿಸಿದೆ.
ಇದೇ ವೇಳೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ನೂರು 'ಸ್ಮಾರ್ಟ್‌ಬಿನ್ ' ನಿರ್ವಹಣೆ ಕುರಿತಂತೆ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಮುಂದಿನ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿತು.

ವಾರ್ಡ್ ಸಮಿತಿ ಸಭೆ ಕುರಿತು ವರದಿ ಸಲ್ಲಿಕೆ: ಬಿಬಿಎಂಪಿ ಪರ ಹಾಜರಿದ್ದ ವಕೀಲ ಕೆ.ಎನ್.ಪುಟ್ಟೇಗೌಡ, ವಾರ್ಡ್ ಸಮಿತಿ ಸಭೆ ನಡೆಸದೇ ಇದ್ದ 35 ವಾರ್ಡ್‌ಗಳ ಕುರಿತು ವರದಿ ಸಲ್ಲಿಸಿದರು. ಕೋರ್ಟ್ ನಿರ್ದೇಶನದಂತೆ 34 ವಾರ್ಡ್‌ಗಳಲ್ಲಿ ಸಭೆ ನಡೆಸಲಾಗಿದೆ. ವಾರ್ಡ್ ಸಂಖ್ಯೆ 38ರಲ್ಲಿ ಸಮಿತಿ ಸಭೆ ನಡೆಸಿಲ್ಲ ಎಂದು ಪೀಠಕ್ಕೆ ಮಾಹಿತಿ ನೀಡಿದರು.












Click it and Unblock the Notifications