ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದ ನಾಯಕನನ್ನು ಉಚ್ಛಾಟಿಸಿದ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 01: ಕರ್ನಾಟಕ ಕಾಂಗ್ರೆಸ್ ಬೆಂಗಳೂರು ನಗರದ ಪ್ರತಿಷ್ಠಿತ ಪದ್ಮನಾಭನಗರ ಕ್ಷೇತ್ರದ ನಾಯಕನನ್ನು ಉಚ್ಛಾಟನೆ ಮಾಡಿದೆ. ಕಾಂಗ್ರಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿ. ಗುರಪ್ಪ ನಾಯ್ಡು ಅವರನ್ನು ಆರು ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಲಾಗಿದೆ. ಲೈಂಗಿಕ ಕಿರುಕುಳದ ಆರೋಪದ ಮೇಲೆ ಗುರಪ್ಪ ನಾಯ್ಡು ವಿರುದ್ಧ ಶಿಕ್ಷಕಿಯೊಬ್ಬರು ದೂರು ನೀಡಿದ್ದು, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಬಿ. ಗುರಪ್ಪ ನಾಯ್ಡು ಉಚ್ಛಾಟನೆಗೊಳಿಸಿರುವ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಬಿ. ಗುರಪ್ಪ ನಾಯ್ಡು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರ ವಿರುದ್ಧ ದೂರು ದಾಖಲಾಗಿ, ಎಫ್ಐಆರ್ ಆದ ಬಳಿಕ ಪಕ್ಷದ ಶಿಸ್ತು ಸಮಿತಿ ಈ ಕ್ರಮ ಕೈಗೊಂಡಿದೆ.

ಲೈಂಗಿಕ ಕಿರುಕುಳ ಮತ್ತು ಮಹಿಳೆಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಬಿ. ಗುರಪ್ಪ ನಾಯ್ಡು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಅವರ ವಿರುದ್ಧ ದಾಖಲಾಗಿರುವ ದೂರಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಶಾಲಾ ಶಿಕ್ಷಕಿಗೆ ಕಿರುಕುಳ: ಉದ್ಯಮಿಯಾಗಿರುವ ಬಿ. ಗುರಪ್ಪ ನಾಯ್ಡು ಶಾಲೆಯನ್ನು ಸಹ ನಡೆಸುತ್ತಾರೆ. ತಾವು ನಡೆಸುವ ಶಾಲೆಯಲ್ಲಿ ಶಿಕ್ಷಕಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಅವರ ವಿರುದ್ಧ ಗುರುವಾರ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಬಿ. ಗುರಪ್ಪ ನಾಯ್ಡು ವಿರುದ್ಧ ಐಪಿಸಿ ಸೆಕ್ಷನ್ 352 (ಎ), 354, 506, 509ಗಳಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 2021 ರಿಂದ 2023ರ ತನಕ ಅವರು ಶಾಲಾ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಆರೋಪವಾಗಿದ್ದು, ಈ ಕುರಿತು ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ಅನ್ನು ಸಹ ಶಿಕ್ಷಕಿ ದೂರಿನ ಜೊತೆ ನೀಡಿದ್ದರು.
ಬಿ. ಗುರಪ್ಪ ನಾಯ್ಡು ಶಾಲೆಯಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ದೌರ್ಜನ್ಯ ಎಸಗುತ್ತಾರೆ. ಅವರನ್ನು ಬಳಸಿಕೊಳ್ಳುತ್ತಾರೆ, ಅತ್ಯಾಚಾರ ಸಹ ನಡೆಸಿದ್ದಾರೆ. ಇದರ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಲೆಯಲ್ಲಿ ಶೇ 75ರಷ್ಟು ಮಹಿಳಾ ಉದ್ಯೋಗಿಗಳೇ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಮಧ್ಯಮ, ಬಡ ಕುಟುಂಬದಿಂದ ಬಂದ ಹೆಣ್ಣುಮಕ್ಕಳು, ಹಲವು ಉದ್ಯೋಗಿಗಳ ಮಕ್ಕಳು ಸಹ ಅದೇ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವುದಲ್ಲದೇ ಅವರ ನಗ್ನ ಚಿತ್ರ, ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಾರೆ. ಅವರು ಹೇಳಿದಂತೆ ಸಹಕಾರ ನೀಡದಿದ್ದರೆ ಅವುಗಳನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಸುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಅವರ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಶಿಕ್ಷಕಿ ತಿಳಿಸಿದ್ದಾರೆ.
ಶಾಲೆಗೆ ಆಗಮಿಸಿದಾಗ ಬಿ. ಗುರಪ್ಪ ನಾಯ್ಡು ನನ್ನನ್ನು ಛೇಂಬರ್‌ಗೆ ಕರೆದು ಮಾನಸಿಕ ಹಿಂಸೆ ನೀಡುತ್ತಾರೆ. ಮನೆಯಲ್ಲಿ ತಯಾರಾಗುವಾಗ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಾರೆ. ಮೂರು ವರ್ಷಗಳಿಂದ ನಾನು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಶಿಕ್ಷಕಿ ದೂರಿದ್ದಾರೆ.












Click it and Unblock the Notifications