ಸದನದಲ್ಲಿ "ಆ" ಒಂದು ಇಲಾಖೆಯ ವರ್ಗಾವಣೆ ದಂಧೆ ರೇಟ್ ಕಾರ್ಡ್ ಪ್ರದರ್ಶಿಸಿದ ಎಚ್‌ಡಿಕೆ

ಬೆಂಗಳೂರು, ಜುಲೈ, 12: ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ ನಾಯಕರು ರಾಜ್ಯದ ಜನತೆಗೆ ಐದು ಅಂಶಗಳ ಗ್ಯಾರಂಟಿಗಳನ್ನು ಹೊರಡಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ ನೀಡಲು ಹೊರಟಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗೆ ದರ ನಿಗದಿ ಆಗಿದೆ. ಈ ಬಗ್ಗೆ ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿ ನನ್ನ ಕೈಯ್ಯಲ್ಲಿ ಇದೆ. ಅದನ್ನು ಯಾರೋ ನನಗೆ ತಂದು ಸಂಪೂರ್ಣ ವಿವರ ನೀಡಿದ್ದಾರೆ ಎಂದರು.

Former Chief minister H.D.Kumaraswamy

ಈ ದರಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿದ ಮಾಜಿ ಮುಖ್ಯಮಂತ್ರಿ ಅವರು, ಬೇಕಿದ್ದರೆ ಇದನ್ನು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತೇನೆ. ನಾನು ಯಾವುದೇ ಸಹನೆಯನ್ನು ಕಳೆದುಕೊಂಡಿಲ್ಲ, ಯಾವುದೇ ದ್ವೇಷವನ್ನು ಮಾಡುವುದಿಲ್ಲ. ಮತ್ತೆ ಹೆಡೆ ಎತ್ತಿದೆ ವರ್ಗಾವಣೆ ಮಾಫಿಯಾ. ನಾನು ಒಂದು ಗಿರಾಕಿಯ ಕರ್ಮಕಾಂಡವನ್ನು ಇಲ್ಲಿ ಹೇಳುತ್ತೇನೆ, ಆದರೆ ಅವರ ಹೆಸರನ್ನು ಹೇಳುವುದಿಲ್ಲ. ಇದನ್ನು ಸ್ಪೀಕರ್ ಮತ್ತು ಸಿಎಂ ಅವರಿಗೆ ಕಳುಹಿಸುತ್ತೇನೆ ಎಂದರು.

ಆದರೆ ಒಂದು ನಿರ್ದಿಷ್ಟ ಇಲಾಖೆಯ ಕಥೆ ಇದು. ಎಷ್ಟೆಷ್ಟು ದರ ನಿಗದಿ ಮಾಡ್ಕೊಂಡಿದ್ದಾರೆನ್ನುವ ವಿವರ ಇಲ್ಲಿದೆ ಎಂದರು. ಅಲ್ಲದೆ ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ವರ್ಗಾವಣೆಯ ರೇಟ್ ಕಾರ್ಡ್ ಹೊರಡಿಸಿತ್ತು. ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಮಾಧ್ಯಮಗಳಲ್ಲಿ ನೀಡಿದ್ದ ಹಗರಣಗಳ ರೇಟ್ ಕಾರ್ಡ್ ಜಾಹೀರಾತನ್ನು ಪ್ರದರ್ಶಿಸಿದರು.

ಹಿಂದೆ ನೀವು ಬಿಜೆಪಿ ಸರ್ಕಾರದ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹಾಕಿದ್ದೀರಿ. ಮುಂದೆ ನಿಮ್ಮ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹೊರಡಿಸಬೇಕಾಗುತ್ತದೆ. ಅದರಿಂದ ಈಗಲೇ ಎಚ್ಚೆತ್ತುಕೊಂಡು ಸರಿ ಮಾಡಿಕೊಳ್ಳಿ ಎನ್ನುವ ಸದುದ್ದೆಶದಿಂದ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಗ್ಯಾರಂಟಿಗಳ ಸೈಡ್ ಎಫೆಕ್ಟ್ ಸರಿ ಮಾಡಿ

ನಿಮ್ಮ ಗ್ಯಾರಂಟಿಗಳನ್ನು ನಾನು ವಿರೋಧ ಮಾಡುವುದಿಲ್ಲ. ಸ್ವಾಗತ ಮಾಡುತ್ತೇವೆ, ನೀವು ನುಡಿದಂತೆ ನಡೆಯುತ್ತಿಲ್ಲ ಅಂತಲೂ ಹೇಳುತ್ತಿಲ್ಲ. ನಡೆಯಲು ಪ್ರಯತ್ನ ಮಾಡುತ್ತಿದ್ದೀರಿ. ಆದರೆ ನುಡಿದಂತೆ ಪೂರ್ಣವಾಗಿ ನಡೆಯಲು ನಿಮ್ಮಿಂದ ಆಗುತ್ತಿಲ್ಲ. ಈ ಗ್ಯಾರಂಟಿಗಳ ಸೈಡ್ ಎಫೆಕ್ಸ್‌ ಬಗ್ಗೆ ಏನು ಮಾಡಿದ್ದೀರಿ? ಈ ಬಗ್ಗೆ ನೀವು ಚಿಂತನೆಯನ್ನೇ ಮಾಡಿಲ್ಲ. ಗ್ಯಾರಂಟಿಗಳ ಬಾಧೆಗೆ ತುತ್ತಾದವರಿಗೆ ನೀವು ಏನಾದರೂ ಒಳ್ಳೆಯದು ಮಾಡಬೇಕಲ್ಲವೆ? ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.

ಜನರ ಮೇಲೆ ಹೊರೆ

ಗೃಹಜ್ಯೋತಿ ಅಂತ ಮಾಡಿದ್ದೀರಿ. ಆದರೆ, 200 ಯೂನಿಟ್ ಉಚಿತ ಎಂದವರು ಈಗ ಸರಾಸರಿ ಲೆಕ್ಕ ಹೇಳಿಕೊಂಡು ಜನರಿಗೆ ಹೊರೆ ಹಾಕುತ್ತಿದ್ದೀರಿ. ಅಸಹಜ ದರಕ್ಕೆ ವಿದ್ಯುತ್ ಖರೀದಿ ಮಾಡಿ ಜನರಿಗೆ ಮೋಸ ಮಾಡಲಾಗಿದೆ. ಹಿಂದೆ ವಿದ್ಯುತ್ ಖರೀದಿ ಬಗ್ಗೆ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿದ್ದೀರಿ. ಆ ಸಮಿತಿ ಹಣೆಬರಹ ಏನಾಯಿತು ಎನ್ನುವುದು ಗೊತ್ತಿದೆ. ಇವತ್ತಿನ ಉಪ ಮುಖ್ಯಮಂತ್ರಿ ಅವರಿಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ ಎಂದರು.

ಒಂದು ಕಡೆ ಮನಸೋ ಇಚ್ಛೆ ದುಡ್ಡು ಕೊಟ್ಟು ಅಸಹಜ ದರಕ್ಕೆ ವಿದ್ಯುತ್ ಖರೀದಿ ಮಾಡಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತೀರಿ. ಇನ್ನೊಂದು ಕಡೆ ಆ ನಷ್ಟ ತುಂಬಿಕೊಳ್ಳಲು ವಿದ್ಯುತ್ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹೇರುತ್ತಿದ್ದೀರಿ. ಇದ್ಯಾವ ನ್ಯಾಯ? ಇದು ಗೃಹಜ್ಯೋತಿಯಾ? ಹೆಚ್ಚಿನ ದರ ಕೊಟ್ಟು ವಿದ್ಯುತ್ ಕೊಂಡುಕೊಳ್ಳೋ ಅವಶ್ಯಕತೆ ಏನಿದೆ? ಎಂದು ಪ್ರಶ್ನೆ ಮಾಡಿದರು.

ಸಿಬಿಐ ತನಿಖೆ ನಡೆಸಿ

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಪ್ರಕರಣ ಪ್ತಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಅವರು, ಸೋಲಾರ್ ಪಿಪಿಎಸ್ ವಿಚಾರದಲ್ಲಿ ಅಕ್ರಮದ ನಡೆದಿದೆ. ಒಂದು ಯೂನಿಟ್ ವಿದ್ಯುತ್‌ಗೆ 9.60ರೂ.ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 25 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಡಿಸಿಎಂ ಅವರನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು.

ಹಾಗೆಯೇ ಇದರ ಬಗ್ಗೆ 2018ರಲ್ಲೂ ನಾನು ಮಾತಾಡಿದ್ದೆ. ನಂತರ ಸದನ ಸಮಿತಿ ರಚಿಸಲಾಯ್ತು. ಇದರಲ್ಲಿ ಏನೇನಾಗಿದೆ ಅಂತಾ ಸತ್ಯ ಗೊತ್ತಾಗಲು ಸಿಬಿಐ ತನಿಖೆಗೆ ಕೊಟ್ಟರೆ ಗೊತ್ತಾಗುತ್ತದೆ. ಕಡಿಮೆ ದರಕ್ಕೆ ವಿದ್ಯುತ್ ಸಿಗುತ್ತಿದ್ದರೂ ದುಬಾರಿ ದರಕ್ಕೆ ಯಾಕೆ ಹೋದರು ಅಂತಾ ಹೇಳಲಿ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.

ದರ ಹೆಚ್ಚಳ ಫೋಟೋ ಹಾಕಿ

ವಿದ್ಯುತ್ ದರ ಏರಿಕೆ ಮಾಡಿದ್ದಕ್ಕೆ ಕಟುವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಈಗ ಫ್ರೀ ಬಿಲ್ ಮೇಲೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಫೋಟೋ ಹಾಕಲು ಹೊರಟಿದ್ದೀರಿ, ಸಂತೋಷ. ಅದೇ ರೀತಿ ದರ ಹೆಚ್ಚಳ ಮಾಡಿದ ಬಿಲ್‌ಗಳ ಮೇಲೆಯೂ ಫೋಟೋ ಹಾಕಿ. ಅದೂ ನಿಮ್ಮದೇ ಕೊಡುಗೆ ಅಲ್ಲವೇ? ಎಂದು ಕುಟುಕಿದರು.

ಖಾಸಗಿ ಬಸ್ ಮಾಲೀಕರಿಗೆ ನೆರವಾಗಿ

ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದೀರಿ, ಸಂತೋಷ. ಹಾಗೆಯೇ ಪುರುಷರಿಗೂ ಫ್ರೀ ಸೌಲಭ್ಯ ಕೊಡಿ. ಅವರೇನು ಪಾಪ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ವೋಟು ಕೊಟ್ಟಿಲ್ಲವೇ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಶಕ್ತಿ ಯೋಜನೆಯಿಂದ ತೊಂದರೆಗೆ ಒಳಗಾಗಿರುವ ಖಾಸಗಿ ಬಸ್‌ ಮಾಲೀಕರು, ಚಾಲಕರಿಗೆ, ಆಟೋ ಚಾಲಕರಿಗೇ ಏನು ಮಾಡಬೇಕು.? ಎಂದು ಸರ್ಕಾರ ಯೋಚನೆ ಮಾಡಬೇಕು. ಬಸ್‌ ಟಿಕೆಟ್ ಹರಿಯೋದ್ರಲ್ಲೂ ಅಕ್ರಮ ನಡೆಯುತ್ತಿದೆ. ಇದನ್ನು ತಡೆಯಲು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಮತದಾರರಿಗೆ ಗಿಫ್ಟ್ ಕೂಪನ್ ಆಮಿಷ

ರಾಜ್ಯಪಾಲರ ಭಾಷಣದಲ್ಲಿ ಹೊಸ ಭರವಸೆ, ಹೊಸ ಕನಸು ಎಂದು ಬರೆಯಲಾಗಿದೆ. ಹಾಗೆಂದರೇನು? ಅಕ್ರಮವಾಗಿ ಚುನಾವಣೆಯಲ್ಲಿ ಗೆಲ್ಲುವುದೇ ಭರವಸೆ, ಕನಸಾ? 5 ಸಾವಿರ ರೂಪಾಯಿ ಗಿಫ್ಟ್ ಕೊಟ್ಟು, ಚುನಾವಣೆ ಗೆಲ್ಲಲಾಗಿದೆ ಎಂದ ಕುಮಾರಸ್ವಾಮಿ ಅವರು, ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಂಚಿರುವ ಗಿಫ್ಟ್ ಕಾರ್ಡ್‌ಗಳನ್ನು ಸದನದಲ್ಲಿ ತೋರಿಸಿದರು. ಅಲ್ಲದೆ ಚುನಾವಣೆ ಮುಗಿದ ಮೇಲೆ ಗಿಫ್ಟ್‌ಗಳನ್ನು ಕೊಟ್ಟಿಲ್ಲ. ಆ ಕಾರ್ಡುಗಳು ಮತದಾರರ ಮನೆಗಳಲ್ಲಿ ಬಿದ್ದಿವೆ ಎಂದು ಆರೋಪ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+