ಗುರುರಾಘವೇಂದ್ರ ಬ್ಯಾಂಕ್‌ನಿಂದ 892 ಕೋಟಿ ರೂ. ಬೋಗಸ್ ಸಾಲ, ಬೇನಾಮಿ ವಹಿವಾಟು
ಬೆಂಗಳೂರು, ಫೆ. 16: ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನ ಅಧ್ಯಕ್ಷ ಕೆ. ರಾಮಕೃಷ್ಣನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಸುಮಾರು 1554 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಅದ್ಯಕ್ಷ ಕೆ. ರಾಮಕೃಷ್ಣ ಅವರನ್ನು ಬಂಧಿಸಿದ ಇಡಿ ಅಧಿಕಾರಿಗಳು ನಗರದ ಪ್ರಧಾನ ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಇಡಿ ವಶಕ್ಕೆ ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಆಧರಿಸಿ ಸಾಲ ನೋಡಿ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವ ಆರೋಪ ರಾಮಕೃಷ್ಣ ಮೇಲಿದೆ.
ರಾಮಕೃಷ್ಣ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2876 ಕೋಟಿ ರೂ. ಸಾಲ ನೀಡಿದ್ದರು. ಇದರಲ್ಲಿ 892 ಕೋಟಿ ರೂ. ಹಣವನ್ನು ಬೋಗಸ್ ದಾಖಲೆಗಳಿಗೆ ಸಾಲ ನೀಡಿ ಅಕ್ರಮ ಎಸಗಿದ್ದರು. ಈ ಸಂಬಂಧ ಮೊದಲು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.

ಬಹುಕೋಟಿ ಹಣ ಬೇನಾಮಿ ವಹಿವಾಟು, ಅಕ್ರಮ ವರ್ಗಾವಣೆ ಆರೋಪ ಸಂಬಂಧ ರಾಮಕೃಷ್ಣ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಬ್ಯಾಂಕ್ ನ ಮತ್ತಷ್ಟು ನಿರ್ದೇಶಕರು ಇಡಿ ಬಲೆಗೆ ಬೀಳುವ ಸಾಧ್ಯತೆಯಿದೆ.
ಸದನದಲ್ಲಿ ಪ್ರತಿಧ್ವನಿಸಿದ ಬ್ಯಾಂಕ್ ಅವ್ಯವಹಾರ: ನಗರದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಅಕ್ರಮ ಸದನದಲ್ಲಿ ಕೂಡ ಚರ್ಚೆಗೆ ಎಡೆ ಮಡಿಕೊಟ್ಟಿತು. ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 1792 ಕೋಟಿ ರೂ. ಮೊತ್ತದ ಅಕ್ರಮ ನಡೆದಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಬ್ಯಾಂಕ್‌ನ ಉಸ್ತುವಾರಿಯನ್ನು ಹೈಕೋರ್ಟ್ ನಿರ್ದೇಶನದ ಅನುಸಾರ ಭಾರತೀಯ ರಿಸರ್ವ ಬ್ಯಾಂಕ್ ನೋಡಿಕೊಳ್ಳುತ್ತಿದೆ. ಅವರಿಂದಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಬ್ಯಾಂಕ್‌ನ 26 ನಿರ್ದೇಶಕರ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸಹಕಾರ ಇಲಾಖೆಯಿಂದಲೂ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಬ್ಯಾಂಕ್‌ನ ಪುಶ್ಚೇತನ ಸಂಬಂಧ ಮಾಸಿಕ ಎರಡು ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ. 2014 -15 ರಿಂದ 2019 ರ ಅವಧಿ ವರೆಗೆ ಬ್ಯಾಂಕ್ ನ ವಹಿವಾಟಿನ ಲೆಕ್ಕ ಪರಿಶೋಧನೆ ನಡೆಸಲಾಗಿದೆ. ಉಳಿದ ಅವಧಿಯ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಹೂಡಿಕೆದಾರರ ಸಭೆ ನಡೆಸಿ ಮಾಹಿತಿ ವಿನಿಮಯಕ್ಕೆ ಆಡಳಿತಾಧಿಕಾರಿಗೆ ಸೂಚಿಸಲಾಗಿದೆ ಎಂದು ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.












Click it and Unblock the Notifications