Bengaluru PG: ಬೆಂಗಳೂರಿನ ಪಿ.ಜಿಗಳಿಗೆ ಈ ನಿಯಮ ಉಲ್ಲಂಘಿಸದಿದ್ದರೆ ಕ್ರಮ: ಜಿಬಿಎ ಎಚ್ಚರಿಕೆ
ಬೆಂಗಳೂರು: ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವ ಪಿ.ಜಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಕೆಲವೊಂದು ಪಿ.ಜಿಗಳು ನಿಯಮ ಉಲ್ಲಂಘನೆ ಮಾಡುತ್ತಿದ್ದು, ನಿಯಮ ಉಲ್ಲಂಘನೆ ಮಾಡುವ ಪಿ.ಜಿಗಳ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳು ಮುಂದಾಗಿವೆ.
ಇದೀಗ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ ಗಳಿಗೆ ಬೀಗಮುದ್ರೆ ಹಾಕುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಪಾಲಿಕೆಯ ಆಯುಕ್ತರು ಹೇಳಿದ್ದಾರೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಸೂಚನೆಯಂತೆ ನಗರ ಪಾಲಿಕೆಯ ಹಲವು ವಾರ್ಡ್‌ಗಳಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಿ.ಜಿ.ಗಳನ್ನು ಪರಿಶೀಲಿಸಲಾಗಿದೆ. ಈ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವ ಕಾರಣಕ್ಕೆ ವಾರ್ಡ್ ಸಂಖ್ಯೆ 01, ಯಲಹಂಕ ಕೋಗಿಲು ಕ್ರಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಪುರುಷರ ಪಿ.ಜಿ.ಗಳನ್ನು ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗಮುದ್ರೆ ಹಾಕಲಾಗಿದೆ.

ಪರಿಶೀಲನೆಯ ಮುಂದುವರಿದ ಭಾಗವಾಗಿ ಸೋಮವಾರ / ಫೆಬ್ರವರಿ 2ರಂದು ವಾರ್ಡ್ ಸಂಖ್ಯೆ: 5 ಜಕ್ಕೂರಿನಲ್ಲಿ ಕೂಡ ಹೆವೆನ್ಲಿ ಕೋ ಲಿವಿಂಗ್ ಪಿ.ಜಿಯ ಅಡುಗೆ ಮನೆಯನ್ನು ಪರಿಶೀಲಿಸಲಾಗಿ, ಶುಚಿತ್ವ ಕಾಪಾಡಿಕೊಳ್ಳದೇ ಇರುವ ಕಾರಣಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅದನ್ನೂ ಬೀಗಮುದ್ರೆಗೊಳಿಸಲಾಗಿದೆ. ಇನ್ನು ಮುಂದೆ ಮಾರ್ಗಸೂಚನೆಗಳನ್ನು ಅನುಸರಿಸದೇ ಇರುವ ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಪಿ.ಜಿ.ಗಳ ಮೇಲೆ ತೀವ್ರ ಕ್ರಮವಹಿಸಲಾಗುವುದು ಎಂದು ಬೆಂಗಳೂರು ಆಯುಕ್ತರು ತಿಳಿಸಿದ್ದಾರೆ.
Bengaluru PGs 574 ಪೇಯಿಂಗ್ ಗೆಸ್ಟ್‌ಗಳಿಗೆ ಸೂಚನೆ
ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಮಾಡಿದ್ದ 574 ಪೇಯಿಂಗ್ ಗೆಸ್ಟ್‌ಗಳಿಗೆ ಭಾನುವಾರ ಸೂಚನೆ ನೀಡಲಾಗಿತ್ತು. ಕೆಲವೊಂದಕ್ಕೆ ಬೀಗ ಸಹ ಹಾಕಲಾಗಿತ್ತು. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಒಟ್ಟು 574 ಪೇಯಿಂಗ್ ಗೆಸ್ಟ್ ವಸತಿಗೃಹಗಳಿಗೆ ತಿಳವಳಿಕೆ ಪತ್ರಗಳನ್ನು ಜಾರಿ ಮಾಡಿದ್ದೆವು ಎಂದು ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದರು.
ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಲ್ಲಿ ಶಾಂತಿನಗರ, ಸಿ.ವಿ.ರಾಮನ್ ನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ನಡೆಯುತ್ತಿರುವ ಎಲ್ಲಾ ಪೇಯಿಂಗ್ ಗೆಸ್ಟ್ ವಸತಿಗೃಹಗಳು (PGs) ಅನುಸರಿಸಬೇಕಾದ/ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳ ಬಗ್ಗೆ ತಪಾಸಣೆ ನಡೆಸಿದ್ದು, ಒಟ್ಟು 574 ಪೇಯಿಂಗ್ ಗೆಸ್ಟ್ ವಸತಿಗೃಹಗಳಿಗೆ ತಿಳವಳಿಕೆ ಪತ್ರಗಳನ್ನು ಜಾರಿ ಮಾಡಲಾಗಿತ್ತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಪಾಲಿಕೆಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಪಿ.ಜಿಗಳನ್ನು ಆಯಾ ನಗರ ಪಾಲಿಕೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ನಿಯಮ ಉಲ್ಲಂಘನೆ ಮಾಡುವ ಪಿ.ಜಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.












Click it and Unblock the Notifications