ಗೋವಿಂದಪುರ ಡ್ರಗ್ ಡೀಲ್ ಪ್ರಕರಣ: ಪ್ರಿಸ್ಟೀಜ್ ಕಂಪನಿ ಒಡೆಯನ ಸಹೋದರಿ ಅಂಜುಂ ರಜಾಕ್ ಗೆ ನೋಟಿಸ್
ಬೆಂಗಳೂರು, ಡಿ. 16: ವಿದೇಶಿ ಡ್ರಗ್ ಪೆಡ್ಲರ್‌ನಿಂದ ಮಾದಕ ವಸ್ತು ತರಿಸಿಕೊಂಡು ಸೇವನೆ ಮಾಡಿದ ಪ್ರಕರಣದಲ್ಲಿ ಪ್ರತಿಷ್ಠಿತ ಬಿಲ್ಡರ್ ಕಂಪನಿ ಪ್ರಿಸ್ಟೀಜ್ ಗ್ರೂಪ್ ಮಾಲೀಕನ ಸಹೋದರಿ ಸಿಕ್ಕಿಬಿದ್ದಿದ್ದಾಳೆ.
ಪ್ರೆಸ್ಟೀಜ್ ಕಂಪನಿಯ ಮಾಲೀಕನ ಸಹೊದರಿ ಅಂಜು ರಜಾಕ್ ಡ್ರಗ್ ಪ್ರಕರಣದಲ್ಲಿ ಸಿಲುಕಿದ ಆರೋಪ ಎದುರಿಸುತ್ತಿದ್ದಾಳೆ. ಸಾವಿರಾರು ಕೋಟಿಗಳ ಒಡತಿ ಅಂಜುಂ ಪರ್ವೇಜ್ ಗೆ ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದಾರೆ. ಡ್ರಗ್ ಪೆಡ್ಲರ್ ಜತೆ ನಿರಂತರ ವಾಟ್ಸಪ್ ಸಂವಹನ ಮಾಡಿದ್ದಾರೆ. ಅಲ್ಲದೇ ಡ್ರಗ್ ತಂದು ಕೊಡುವಂತೆ ಅಂಜುಂ ರಜಾಕ್ ವಾಟ್ಸಪ್ ಸಂದೇಶ ರವಾನಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದರು. ಎರಡು ಬಾರಿ ವಿಚಾರಣೆಗೂ ಅಂಜುಂ ಹಾಜರಾಗಿರಲಿಲ್ಲ. ಇದೀಗ ಮತ್ತೊಂದು ನೋಟಿಸ್ ನೀಡಿದ್ದಾರೆ.
ವಿಚಾರಣೆಗೆ ಗೈರು:
ಕಳೆದ ಆಗಸ್ಟ್ ನಲ್ಲಿ ಗೋವಿಂದಪುರ ಪೊಲೀಸರು ವಿದೇಶಿ ಡ್ರಗ್ ಪೆಡ್ಲರ್ ಥಾಮಸ್ ಕಾಲೂ ಎಂಬಾತನನ್ನು ಬಂಧಿಸಿದ್ದರು. ಥಾಮಸ್ ಕಾಲೂ ಬಳಿ ಸುಮಾರು ಹದಿನಾರು ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಗೋವಿಂದಪುರ ಪೊಲೀಸರು ವಶಪಡಿಸಿಕೊಂಡಿದ್ದರು. ಈತನ ಮೊಬೈಲ್ ವಶಪಡಿಸಿಕೊಂಡಿದ್ದ ಪೊಲೀಸರು ಈತ ಸಂಪರ್ಕ ಸಾಧಿಸಿದ್ದ ಮಾದಕ ವ್ಯಸನಿಗಳ ವಿವರಗಳನ್ನು ಪಡೆದು ತನಿಖೆ ನಡೆಸುತ್ತಿದ್ದರು. ಈ ವೇಳೆ ಪ್ರಿಸ್ಟೇಜ್ ಕಂಪನಿಯ ಮಾಲೀಕ ಇರ್ಫಾನ್ ರಜಾಕ್ ಅವರ ಸಹೋದರಿ ಅಂಜುಂ ರಜಾಕ್ ಕಾಲೂ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ.

ಮಾತ್ರವಲ್ಲ, ಮಾದಕ ವಸ್ತು ತಂದು ಕೊಡುವಂತೆ ಸಂವಹನ ನಡೆಸಿದ್ದು, ಈ ಕುರಿತ ಸಾಕ್ಷಾಧಾರಗಳನ್ನು ಗೋವಿಂದಪುರ ಪೊಲೀಸರು ಕಲೆ ಹಾಕಿದ್ದಾರೆ. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಸೆಪ್ಟೆಂಬರ್ 25 ರಂದು ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರ ನೋಟಿಸ್ ಗೆ ಅಂಜುಂ ಕ್ಯಾರೆ ಎಂದಿಲ್ಲ. ಇದೀಗ ಮತ್ತೊಂದು ನೋಟಿಸ್ ನೀಡಿ ವಿಚಾರಣೆಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧನ ಆಗ್ತಾರಾ ಅಂಜುಂ:
ಎನ್‌ಡಿಪಿಎಸ್ ಆಕ್ಟ್ ಅಡಿ ಕೇಸು ದಾಖಲಿಸಿರುವ ಗೋವಿಂದಪುರ ಪೊಲೀಸರು ಈವರೆಗೂ ಪ್ರಿಸ್ಟೀಜ್ ಒಡತಿ ಅಂಜುಂ ರಜಾಕ್ ಅವರಿಗೆ ಎರಡು ನೋಟಿಸ್ ನೀಡಿದ್ದಾರೆ. ಎರಡು ನೋಟಿಸ್ ಗೂ ಬಂದಿಲ್ಲ. ಇದೀಗ ಮತ್ತೊಂದು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಇದರ ನಡುವೆ ಜಾಮೀನು ಪಡೆದು ಪೊಲೀಸರ ವಿಚಾರಣೆಗೆ ಹಾಜರಾಗಲು ಅಂಜುಂ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ಮೂರನೇ ಬಾರಿಯೂ ನೋಟಿಸ್ ಗೆ ಹಾಜರಾಗದಿದ್ದರೆ ಅಂಜುಂ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸುವ ಸಾಧ್ಯತೆಯಿದೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಗ್ರಗಣ್ಯ ಹೆಸರು ಗಳಿಸಿರುವುದು ಪ್ರಿಸ್ಟೇಜ್ ಕಂಪನಿ. ಅದರ ಮಾಲೀಕ ಇರ್ಫಾನ್ ರಜಾಕ್. ಸಾವಿರಾರು ಕೋಟಿ ವಹಿವಾಟು ನಡೆಸುವ ಪ್ರಿಸ್ಟೀಜ್ ಕಂಪನಿಯ ಒಡತಿ ಇದೀಗ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಪ್ರಕರಣ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ರೋಚಕ:
ಅಂಜುಂ ರಜಾಕ್ ಡ್ರಗ್ ಪ್ರಕರಣದಲ್ಲಿ ಕಳೆದ ಆಗಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ವಿದೇಶಿ ಡ್ರಗ್ ಪೆಡ್ಲರ್ ಥಾಮಸ್ ಎಚ್‌ಎಸ್ ಬಿಆರ್ ಬಡಾವಣೆಯಲ್ಲಿ ಡ್ರಗ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಗೋವಿಂದಪುರ ಪೊಲೀಸ್ ಠಾಣೆ ಸಬ್‌ಇನ್ಸ್ ಪೆಕ್ಟರ್ ಲೋಕೇಶ್ ಕಾರ್ಯಾಚರಣೆ ನಡೆಸಿದ್ದರು. ನೈಜೀರಿಯಾ ಮೂಲದ ಥಾಮಸ್ ಕಾಲೂ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಳಿ ಸುಮಾರು ಹದಿನಾರು ಲಕ್ಷ ರೂ. ಮೌಲ್ಯದ ಎಕ್ಸಟೆಸಿ ಪಿಲ್ಸ್ ಸಿಕ್ಕಿತ್ತು. ಈತ ಡ್ರಗ್ ಪೆಡ್ಲಿಂಗ್ ಮಾಡಲು ಬಳಕೆ ಮಾಡುತ್ತಿದ್ದ ಮೊಬೈಲ್ ಪೋನ್ ಕೂಡ ಸಿಕ್ಕಿತ್ತು. ಈತನ್ನು ವಿಚಾರಣೆ ನಡೆಸಿದಾಗ ರಾಜಧಾನಿಯ ಪ್ರತಿಷ್ಠಿತ ವ್ಯಕ್ತಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಜಾಡು ಹಿಡಿದು ತನಿಖೆ ನಡೆಸಿದಾಗ ಪ್ರಿಸ್ಟೀಜ್ ಕಂಪನಿ ಒಡೆಯನ ಸಹೋದರಿ ಅಂಜುಂ ರಜಾಕ್ ಕೂಡ ಡ್ರಗ್ ತರಿಸಿಕೊಂಡು ಸೇವನೆ ಮಾಡಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಾಗಿವೆ. ಈಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಹಲವು ದಿನಗಳ ಬಳಿಕ ಪ್ರಕರಣ ಬೆಳಕಿಗೆ:
ಥಾಮಸ್ ಕಾಲೂ ಬಂಧನದ ವೇಳೆ ಅಂಜುಂ ಹೆಸರನ್ನು ಪೊಲೀಸರು ಪ್ರಸ್ತಾಪ ಮಾಡಿರಲಿಲ್ಲ. ಮೊದಲ ಬಾರಿ ನೋಟಿಸ್ ನೀಡಿದಾಗಲೂ ಅಂಜುಂ ವಿಚಾರವನ್ನ ಪೊಲೀಸರು ಮರೆ ಮಾಚಿದ್ದರು. ಇದೀಗ ಏಕಾಏಕಿ ಅಂಜುಂ ಹೆಸರು ಡ್ರಗ್ ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವ ಸಂಗತಿ ಹೊರ ಬಿದ್ದಿದೆ. ಇದರ ಬೆಳವಣಿಗೆ ನಡುವೆ ಗೋವಿಂದಪುರ ಪೊಲೀಸರು ಮೂರನೇ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಅಂಜುಂ ಬಂಧನಕ್ಕೆ ಒಳಗಾಗುತ್ತಾರಾ? ಇಲ್ಲವೇ ವಿಚಾರಣೆಗೆ ಹಾಜರಾಗಿ ಬಂಧನದ ಭೀತಿಯಿಂದ ಪಾರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸಾವಿರಾರು ಕೋಟಿ ಒಡೆತನದ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಅಂಜುಂ ರಜಾಕ್ ಮಾದಕ ಜಾಲದಲ್ಲಿ ಸಿಕ್ಕಿ ಬಿದ್ದಿದ್ದು, ಉದ್ಯಮ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.












Click it and Unblock the Notifications