ಪೊಲೀಸ್ ಬಲ ಬಳಸಿ ಬಿಜೆಪಿಯ ಪ್ರತಿಭಟನೆ ಹತ್ತಿಕ್ಕಲು ಯತ್ನ: ಬಿಎಸ್‌ವೈ
ಬೆಂಗಳೂರು, ಮೇ 28: ಸಾಲಮನ್ನಾ ಮಾಡಲು ಒತ್ತಾಯಿಸಿ ಬಿಜೆಪಿ ಮಾಡುತ್ತಿರುವ ಪ್ರತಿಭಟನೆಯನ್ನು ಪೊಲೀಸ್ ಬಲ ಬಳಸಿ ಸರ್ಕಾರವು ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದ ನಮ್ಮ ಸಂಸದರನ್ನು ವಿನಾ ಕಾರಣ ಬಂಧಿಸಲಾಗಿದೆ. ಹಲವು ಕಡೆ ನಮ್ಮ ಕಾರ್ಯಕರ್ತರನ್ನು ಪೊಲೀಸರು ಬಲವಂತದಿಂದ ಎಳೆದೊಯ್ದಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಶಾಂತ ರೀತಿಯಿಂದ ಬಂದ್ ಮಾಡುವ ಹಕ್ಕು ಎಲ್ಲರಿಗೂ ಇದೆ, ನಮ್ಮ ಕಾರ್ಯಕರ್ತರು ಶಾಂತ ರೀತಿಯಿಂದಲೇ ಬಂದ್ ಮಾಡಿದರು, ಎಲ್ಲೂ ರಸ್ತೆ ತಡೆ ಮಾಡಲಿಲ್ಲ ಆದರೂ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ ಎಂದರು.

ಒಂದು ವಾರದೊಳಗೆ ಸಾಲಮನ್ನಾ ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ ಹಾಗಾಗಿ ಒಂದು ವಾರದವರೆಗೆ ಕಾಯುತ್ತೇವೆ, ಆಗ ಮತ್ತೆ ಎಚ್‌ಡಿಕೆ ಮಾತು ತಪ್ಪಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಯಡಿಯೂರಪ್ಪ ಎಚ್ಚರಿಸಿದರು.
ಸಚಿವ ಸಂಪುಟ ಪುನರ್ ರಚನೆ ಕಚ್ಚಾಟದಲ್ಲಿ ನಿರತರಾಗಿರುವ ಸಮ್ಮಿಶ್ರ ಸರ್ಕಾರ ರಾಜ್ಯದ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದ ಅವರು, ಕುಮಾರಸ್ವಾಮಿ ಅವರು ದೆಹಲಿಯಿಂದ ಆದಷ್ಟು ಬೇಗ ಬಿಡುವು ಮಾಡಿಕೊಂಡು ಮುಖ್ಯಮಂತ್ರಿಯ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ವ್ಯಂಗವಾಡಿದರು.
'ನಾನು ಕಾಂಗ್ರೆಸ್‌ನ ಮರ್ಜಿಯಲ್ಲಿದ್ದೇನೆ' ಎಂದಿರುವ ಕುಮಾರಸ್ವಾಮಿ ಕರ್ನಾಟಕದ ಜನರಿಗೆ ಅಪಮಾನ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಈ ವರೆಗೆ ತನ್ನ ಮತದಾರನಿಗೆ ಈ ರೀತಿಯ ಅವಮಾನ ಮಾಡಿದ ಮತ್ತೊಬ್ಬ ಮುಖ್ಯಮಂತ್ರಿ ಇಲ್ಲ, ಕೂಡಲೇ ಅವರು ಜನರ ಕ್ಷಮಾಪಣೆ ಕೇಳಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.
ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯ ಆರಂಭದಲ್ಲಿಯೇ ಇಂದು ಬೆಳಿಗ್ಗೆ ಅಪಘಾತದಲ್ಲಿ ನಿಧನರಾದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಆತ್ಮಕ್ಕೆ ಶಾಂತಿ ಕೋರಿದರು.











Click it and Unblock the Notifications