ಬೆಂಗಳೂರಲ್ಲಿ ಬಾಂಗ್ಲಾ ಮುಸ್ಲಿಮರಿಗೆ ಮನೆ, ಭೂ ಒತ್ತುವರಿ ಮಾಫಿಯಾಗೆ ಸರ್ಕಾರ ಉತ್ತೇಜನ: ಆರ್.ಅಶೋಕ
ಬೆಂಗಳೂರು: ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿನ ಅಕ್ರಮ 200 ಒತ್ತುವರಿದಾರರ ತೆರವಿನ ಚರ್ಚೆಗಳು ಅಂತಾರಾಜ್ಯದಿಂದ ಅಂತಾರಾಷ್ಟ್ರ ತಲುಪಿದೆ. ಕೇರಳ ಸಿಎಂ ಬೆನ್ನಲ್ಲೆ ಪಾಕಿಸ್ತಾನ ದೇಶ ಸಹ ಈ ಬಗ್ಗೆ ಪ್ರತಿಕ್ರಿಯಿಸಿದೆ. ಇದೀಗ ಭೂ ಒತ್ತುವರಿ ಮಾಡುವವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಮೂಲಕ ಭೂ ಮಾಫಿಯಾಗೆ ಪ್ರೋತ್ಸಾಹ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಗಿಲು ಕ್ರಾಸ್‌ನಲ್ಲಿರುವ ಸರ್ಕಾರಿ ಜಮೀನಿನಲ್ಲಾದ ಒತ್ತುವರಿ ತೆರವು ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾತನಾಡಿದ್ದರು. ಒತ್ತುವರಿ ತೆರವು ಸ್ಥಳದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಯೋಜನೆಗೆ 100 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಇಲ್ಲಿ ವಾಸ ಮಾಡುತ್ತಿದ್ದು, ನಕಲಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯತೆಯಿಂದ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಸರ್ವೆ ನಂ.99 ರಲ್ಲಿ 9 ಎಕರೆಯ ಜಾಗದಲ್ಲಿ ಬಂಡೆ ಇದ್ದು, ಅದು ಕಲ್ಲು ಕ್ವಾರಿಯಾಗಿ ಬದಲಾಗಿದೆ. ಬಳಿಕ ಅದೀಗ ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇಲ್ಲಿ ಮುಸ್ಲಿಮರು 20 ವರ್ಷದಿಂದ ಇದ್ದಾರೆ ಎನ್ನಲಾಗಿದೆ. ಆದರೆ 2023 ರ ಗೂಗಲ್ ಮ್ಯಾಪ್ ಪ್ರಕಾರ, ಇಲ್ಲಿ ನೀರು ತುಂಬಿದ್ದು ಖಾಲಿ ಜಾಗವಿತ್ತು. ಇಲ್ಲಿ ಯಾರೂ ವಾಸ ಇರಲಿಲ್ಲ. 15 ಎಕರೆಯೂ ಖಾಲಿಯೇ ಇತ್ತು.
ಇದು ಕಾಂಗ್ರೆಸ್‌ನ ಪ್ರಾಯೋಜಿತ ಅಕ್ರಮ
ಈ ಸ್ಥಳದಲ್ಲಿ ಇತ್ತೀಚೆಗೆ ತಾತ್ಕಾಲಿಕವಾಗಿ ಇವರೆಲ್ಲ ಕಳೆದ ಆರು ತಿಂಗಳಿಂದ ವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ವಾಸಿಮ್ಎಂಬುವವನು 4-5 ಲಕ್ಷ ರೂ. ಪಡೆದು ಮನೆ ಮಾಡಿಕೊಟ್ಟಿದ್ದಾನೆ. ಇದು ಕಾಂಗ್ರೆಸ್ ಪ್ರಾಯೋಜಿತ ಅಕ್ರಮವಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ತೆರವು ಮಾಡುತ್ತೇನೆ ಎನ್ನುತ್ತಾರೆ. ಆದರೆ ಕಸ ಹಾಕುವ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. 650 ಕೋಟಿ ರೂ. ಬೆಲೆಬಾಳುವ ಜಮೀನನ್ನು ಇವರಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಭೂ ಒತ್ತುವರಿ ಮಾಫಿಯಾಗೆ ಸರ್ಕಾರ ಪ್ರೋತ್ಸಾಹ?
ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಪ್ರಕ್ರಿಯೆಗಳನ್ನು ಪಾಲಿಸಿಲ್ಲ. ಬೆಂಗಳೂರಿನಲ್ಲಿ 40 ಕಡೆ ಒತ್ತುವರಿ ತೆರವು ಮಾಡಿದ್ದು, ಎಲ್ಲರಿಗೂ ಮಾನವೀಯತೆ ಮನೆ ನಿರ್ಮಿಸಬೇಕಾಗುತ್ತದೆ. ಅಂದರೆ ಒತ್ತುವರಿ ಮಾಡುವ ಕಳ್ಳರಿಗೆ ಉತ್ತೇಜನ ನೀಡಲಾಗುತ್ತಿದೆ. ಯಾವ ಯೋಜನೆ ಅಡಿಯಲ್ಲಿ ಸಿಎಂ ಸಿದ್ದರಾಮಯ್ಯ ಮನೆ ನೀಡುತ್ತಾರೆ? ಭೂ ಒತ್ತುವರಿ ಮಾಫಿಯಾಗೆ ಪ್ರೋತ್ಸಾಹ ನೀಡಲಾಗುತ್ತಿದೆಯೇ? ಇದರಿಂದ ಮಿನಿ ಪಾಕಿಸ್ತಾನ ನಿರ್ಮಾಣವಾಗಿ ಡ್ರಗ್ ಮಾಫಿಯಾ ಬೆಳೆಯಲಿದೆ. ಇವರೆಲ್ಲ ಯಾರು ಎಂದು ಮೊದಲು ಪತ್ತೆ ಮಾಡಬೇಕಿದೆ. ಇವರು ವಲಸಿಗರು ಎಂದು ಸಿಎಂ ಹೇಳಿದ್ದಾರೆ ಎಂದು ಸರ್ಕಾರದ ನಡೆಗೆ ಕಿಡಿ ಕಾರಿದರು.
ಕಾಂಗ್ರೆಸ್ ನಾಯಕರು ಅಕ್ರಮ ವಲಸಿಗರಿಂದ ಹಣ ಪಡೆದು ಕೋಗಿಲು ಬಡಾವಣೆಯ ಸರ್ಕಾರಿ ಭೂಮಿಯನ್ನು ಅಕ್ರಮ ವಲಸಿಗರಿಗೆ ನೀಡಿದ್ದಾರೆ. ಕಾಂಗ್ರೆಸ್ ಪ್ರಾಯೋಜಿತವಾಗಿ ಅಕ್ರಮ ಮನೆಗಳನ್ನು ನಿರ್ಮಿಸಲಾಗಿತ್ತು. ಕೋಟಿಗಟ್ಟಲೆ ಬೆಲೆಬಾಳುವ ಸರ್ಕಾರಿ ಜಾಗವನ್ನು ಕಾಂಗ್ರೆಸ್ ನಾಯಕರೇ ಅಕ್ರಮ ವಲಸಿಗರಿಗೆ ನೀಡಿದ್ದರು.#CongressFailsKarnataka… pic.twitter.com/VR6y2Pc8bN
— R. Ashoka (@RAshokaBJP) December 30, 2025
ರಾಜ್ಯದಲ್ಲಿ 37.48 ಲಕ್ಷ ಮಂದಿಗೆ ಮನೆ ಇಲ್ಲ
ರಾಜ್ಯದಲ್ಲಿ 17.31 ಲಕ್ಷ ಜನರು ನಿವೇಶನ ಇಲ್ಲದವರು ಹಾಗೂ 3 ಲಕ್ಷ ಜನರು ವಸತಿ ರಹಿತರಾಗಿದ್ದಾರೆ. ಒಟ್ಟು 37.48 ಲಕ್ಷ ಜನರು ಮನೆ ಇಲ್ಲದೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಸ್ಥಳೀಯ ಬಡವರಿಗೆ ಅವಕಾಶ ಇಲ್ಲ. ಆದರೆ ಹೊರಗಿಂದ ಬಂದವರಿಗೆ ಮನೆ ಕಟ್ಟಿ ಕೊಡುತ್ತೇನೆ ಎನ್ನುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟು ವೇಗವಾಗಿ ಮನೆ ಯೋಜನೆ ಮಂಜೂರಾಗಿರುವುದನ್ನು ನಾನು ನೋಡಿಯೇ ಇಲ್ಲ. ಕೇರಳದಲ್ಲಿ ಆನೆಯಿಂದ ಸತ್ತರೆ, ಪ್ರವಾಹದಿಂದ ಸತ್ತರೆ ಪರಿಹಾರ ನೀಡುತ್ತಾರೆ. ಕರ್ನಾಟಕವನ್ನು ಕೇರಳ ಸರ್ಕಾರಕ್ಕೆ ಅಡಮಾನ ಇಡಲಾಗಿದೆಯೇ ಎಂದು ಪ್ರಶ್ನೆ ಮಾಡಿದರು.
ಉನ್ನತ ಮಟ್ಟದ ತನಿಖೆಗೆ ಒತ್ತಾಯ
ಪಾಕಿಸ್ತಾನದ ವಕ್ತಾರರು ಈ ಬಗ್ಗೆ ಮಾತನಾಡಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದಿದ್ದಾರೆ. ಆ ಮಟ್ಟಿಗೆ ಸರ್ಕಾರ ಹಾಳಾಗಿ ಹೋಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಇವರು ಕನ್ನಡಿಗರೇ, ವಿದೇಶಿಯರೇ ಎಂದು ತನಿಖೆ ಮಾಡಬೇಕು. ಅಲ್ಲಿಯವರೆಗೂ ಅವರಿಗೆ ಮನೆ ನೀಡಬಾರದು ಎಂದು ಆರ್.ಅಶೋಕ ಆಗ್ರಹಿಸಿದ್ದಾರೆ.












Click it and Unblock the Notifications