ಬೆಂಗಳೂರಲ್ಲಿ ಆಸ್ಪತ್ರೆ ಸೇರುವ ಕೋವಿಡ್ ಸೋಂಕಿತರ ಸಂಖ್ಯೆ ಶೂನ್ಯ!
ಬೆಂಗಳೂರು, ಮಾರ್ಚ್ 04: ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಹೊಸ ಪ್ರಕರಣಗಳ ಸಂಖ್ಯೆ 239. ಸಕ್ರಿಯ ಪ್ರಕರಣಗಳು 2,630 ಆಗಿದೆ.
ಕಳೆದ 10 ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹ ಕುಸಿತವಾಗಿದೆ. ಫೆಬ್ರವರಿ 26ರ ಬಳಿಕ ಯಾವುದೇ ಸೋಂಕಿತರು ಬೆಂಗಳೂರು ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿಲ್ಲ. ಕೋವಿಡ್ 3ನೇ ಅಲೆ ಪ್ರಾರಂಭವಾದ ಬಳಿಕ ಮೊದಲ ಬಾರಿಗೆ ಯಾರೂ ಸಹ ಆಸ್ಪತ್ರೆ ಸೇರಿಲ್ಲ.
ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿ ಇದ್ದಾಗ ಬೆಂಗಳೂರು ನಗರದಲ್ಲಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಶೇ 21ಆಗಿತ್ತು. ಮೂರನೇ ಅಲೆ ಸಂದರ್ಭದಲ್ಲಿ ಇದು ಶೇ 5 ಆಗಿತ್ತು. ಫೆಬ್ರವರಿ 26ರ ಬಳಿಕ ಯಾರೂ ಸಹ ಆಸ್ಪತ್ರೆಗೆ ದಾಖಲಾಗಿಲ್ಲ.

ಕಳೆದ 10 ದಿನದಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಶೇ 10 ರಿಂದ 0ಗೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳಿನಲ್ಲಿ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. 28 ದಿನದಲ್ಲಿ 30,870 ಜನರಿಗೆ ಸೋಂಕು ತಗುಲಿದೆ. ಜನವರಿಯಲ್ಲಿ ಸೋಂಕಿತರ ಸಂಖ್ಯೆ 4,56,462 ಆಗಿತ್ತು.
ಜನವರಿ ತಿಂಗಳಿನಲ್ಲಿ ನಗರದಲ್ಲಿ ಕೇವಲ 191 ಜನರು ಸಾವನ್ನಪ್ಪಿದ್ದರು. ಆದರೆ ಫೆಬ್ರವರಿಯಲ್ಲಿ ಮೃತಪಟ್ಟವರ ಸಂಖ್ಯೆ 315. 2021ರ ಮೇ ತಿಂಗಳಿನಲ್ಲಿ 6,971 ಜನರು ಸಾವನ್ನಪ್ಪಿದ್ದರು. ನಗರದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 1,69,28 ಆಗಿದೆ.
ಕೋವಿಡ್ ಮೊದಲ ಅಲೆ; ಕೋವಿಡ್ ಮೊದಲ ಅಲೆ 2020ರ ಮಾರ್ಚ್ 8ರಂದು ನಗರಕ್ಕೆ ಅಪ್ಪಳಿಸಿತು. 2021ರ ಮಾರ್ಚ್ ಮಧ್ಯದಲ್ಲಿ 2ನೇ ಅಲೆ ಬಂದಿತು. 2021ರ ಡಿಸೆಂಬರ್‌ನಲ್ಲಿ 3ನೇ ಅಲೆ ಆರಂಭವಾಯಿತು.
ಮೊದಲ ಅಲೆಯಲ್ಲಿ 2020ರ ಜೂನ್ 30ರ ತನಕ ನಗರದಲ್ಲಿ 5,435 ಪ್ರಕರಣ ದಾಖಲಾಯಿತು, 95 ಜನರು ಮೃತಪಟ್ಟರು. ಜುಲೈನಲ್ಲಿ 52,406 ಪ್ರಕರಣ ದಾಖಲಾಯಿತು. 962 ಜನರು ಸಾವನ್ನಪ್ಪಿದರು. 2020ರ ಆಗಸ್ಟ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 75,514 ಆಯಿತು, 950 ಜನರು ಸಾವನ್ನಪ್ಪಿದರು.
ಸೆಪ್ಟೆಂಬರ್‌ನಲ್ಲಿ ಮೊದಲ ಅಲೆ ಪೀಕ್‌ಗೆ ಹೋಯಿತು. ಪ್ರಕರಣಗಳ ಸಂಖ್ಯೆ 1,03,758 ಆಯಿತು. 971 ಜನರು ಸಾವನ್ನಪ್ಪಿದ್ದರು. ಅಕ್ಟೋಬರ್ ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತು. ಡಿಸೆಂಬರ್‌ನಲ್ಲಿ 18,551 ಪ್ರಕರಣ ದಾಖಲಾಗಿ, 184 ಜನರು ಮೃತಪಟ್ಟಿದ್ದರು.
2021ರಲ್ಲಿ ಜನವರಿಯಲ್ಲಿ ನಗರದಲ್ಲಿ 10,311 ಪ್ರಕರಣಗಳು ದಾಖಲಾದವು, 66 ಜನರು ಸಾವನ್ನಪ್ಪಿದರು. ಫೆಬ್ರವರಿಯಲ್ಲಿ 6,813, ಮಾರ್ಚ್‌ನಲ್ಲಿ 31,886, ಏಪ್ರಿಲ್‌ನಲ್ಲಿ 3,38,360, ಮೇ ತಿಂಗಳಿನಲ್ಲಿ 4,06,489 ಪ್ರಕರಣಗಳು ದಾಖಲಾದವು.
ಜೂನ್‌ನಲ್ಲಿ 50,330 ಪ್ರಕರಣ ದಾಖಲಾದರೆ 2,280 ಜನರು ಸಾವನ್ನಪ್ಪಿದರು. ಜುಲೈನಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ 13,104 ಪ್ರಕರಣ ಪತ್ತೆಯಾಯಿತು. ಆಗಸ್ಟ್‌ನಲ್ಲಿ 10,089, ಸೆಪ್ಟೆಂಬರ್‌ನಲ್ಲಿ 8,234 ಪ್ರಕರಣಗಳು ದಾಖಲಾಗಿತ್ತು.
ಮೂರನೇ ಅಲೆಯಲ್ಲಿ ಬೆಂಗಳೂರು ನಗರದಲ್ಲಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯಾಯಿತು. ಮನೆಯಲ್ಲಿಯೇ ಸೋಂಕಿತರು ಚಿಕಿತ್ಸೆ ಪಡೆಯಲು ಆರಂಭಿಸಿದರು. ಆಗ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಮುಚ್ಚಲು ಆರಂಭಿಸಿತು. ಈಗ ಆಸ್ಪತ್ರೆ ಸೇರುವವರ ಸಂಖ್ಯೆಯೂ ಶೂನ್ಯಕ್ಕೆ ಕುಸಿದಿದೆ.
ಮೂರನೇ ಅಲೆಯಲ್ಲಿ ಮೊದಲ ಬಾರಿಗೆ ನಗರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 250ಕ್ಕಿಂತ ಕಡಿಮೆಯಾಗಿದೆ. ಗುರುವಾರದ ಹೆಲ್ತ್ ಬುಲೆಟಿನ್‌ನಂತೆ ಕರ್ನಾಟಕದಲ್ಲಿ ಪತ್ತೆಯಾದ ಹೊಸ ಪ್ರಕರಣಗಳು 382. ಸಕ್ರಿಯ ಪ್ರಕರಣಗಳು 3,890.












Click it and Unblock the Notifications