Gold: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಚಿನ್ನ ಕಳ್ಳಸಾಗಣೆ ದಂಧೆ: 5 ಕೋಟಿ ರೂಪಾಯಿ ಮೌಲ್ಯದ 3 ಕೆ.ಜಿ ಶುದ್ಧ ಚಿನ್ನ ವಶ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು, ಭಾರಿ ಪ್ರಮಾಣದ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದ ಅಂತರರಾಷ್ಟ್ರೀಯ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಏಪ್ರಿಲ್ 6 ಮತ್ತು 7ರಂದು ನಡೆದ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಸರಿಸುಮಾರು 5 ಕೋಟಿ ರೂಪಾಯಿ ಮೌಲ್ಯದ 3 ಕೆ.ಜಿ ಶುದ್ಧ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕ್ಯಾಪ್ಸುಲ್‌ಗಳಲ್ಲಿ ಕಳ್ಳಸಾಗಾಟ
ಕಳ್ಳಸಾಗಣೆದಾರರು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಣ್ಣ ಕ್ಯಾಪ್ಸುಲ್‌ಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜಾಲವು ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ತಪ್ಪಿಸಲು ಅತ್ಯಂತ ಚಾಣಾಕ್ಷ ತಂತ್ರಗಳನ್ನು ಬಳಸುತ್ತಿತ್ತು. ಕಳ್ಳಸಾಗಣೆದಾರರು ವಿಮಾನ ನಿಲ್ದಾಣದ ವಾಶ್‌ರೂಮ್ ಮತ್ತು ಸ್ಮೋಕಿಂಗ್ ಝೋನ್‌ಗಳಂತಹ ಸೂಕ್ಷ್ಮ ಪ್ರದೇಶಗಳನ್ನು ತಮ್ಮ ವಿನಿಮಯ ಕೇಂದ್ರಗಳನ್ನಾಗಿ ಬಳಸಿಕೊಳ್ಳುತ್ತಿದ್ದರು.

ಪಾಸ್‌ಕೋಡ್ ಸಿಸ್ಟಮ್ ಮೂಲಕ ಪರಸ್ಪರ ಗುರುತಿಸಿಕೊಳ್ಳುತ್ತಿದ್ದ ಇವರು, ಕಸ್ಟಮ್ಸ್ ತಪಾಸಣೆಯನ್ನು ತಪ್ಪಿಸಲು ಚಿನ್ನದ ಕ್ಯಾಪ್ಸುಲ್‌ಗಳನ್ನು ದೇಹಕ್ಕೆ ಅಂಟಿಸಿಕೊಂಡು ಓಡಾಡುತ್ತಿದ್ದರು. ಈ ಕಾರ್ಯಾಚರಣೆಯು ಇಷ್ಟೊಂದು ಸುಲಭವಾಗಿ ನಡೆಯಲು ವಿಮಾನ ನಿಲ್ದಾಣದ ಒಳಗಿನ ವ್ಯಕ್ತಿಯೊಬ್ಬನ ಸಹಾಯವೂ ಇತ್ತು ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ಲ್ಯಾನ್ ಕಂಡು ಅಧಿಕಾರಿಗಳು ಶಾಕ್
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಟರ್ಮಿನಲ್-2ರಲ್ಲಿ ನಿಗಾ ಇರಿಸಿ ಅತ್ಯಾಧುನಿಕ ಕಳ್ಳಸಾಗಣೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಸಾಗಣೆದಾರರನ್ನು ತಡೆದಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ, ಕ್ಯಾಪ್ಸುಲ್ ಆಕಾರದ ಪ್ಯಾಕೆಟ್‌ಗಳಲ್ಲಿ ಪೇಸ್ಟ್ ರೂಪದಲ್ಲಿ ಅತ್ಯಂತ ಚಾಣಾಕ್ಷತನದಿಂದ ಬಚ್ಚಿಟ್ಟಿದ್ದ ಅಂದಾಜು ₹5 ಕೋಟಿ ಮೌಲ್ಯದ ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವಿಮಾನ ಬದಲಾವಣೆಗಾಗಿ ಇರುವ ಹೆಚ್ಚಿನ ಸಮಯವನ್ನು ಬಳಸಿಕೊಂಡು ವಿಮಾನ ನಿಲ್ದಾಣದ ಒಳಗೆ ರಹಸ್ಯವಾಗಿ ನಿಷೇಧಿತ ವಸ್ತುಗಳನ್ನು ವರ್ಗಾವಣೆ ಮಾಡುತ್ತಿದ್ದ ಅಂಶ ತನಿಖೆಯಿಂದ ಬಹಿರಂಗವಾಗಿದೆ. ಕಸ್ಟಮ್ಸ್ ತಪಾಸಣೆಯನ್ನು ತಪ್ಪಿಸಲು, ಶೌಚಾಲಯಗಳು ಮತ್ತು ಧೂಮಪಾನ ವಲಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ 'ಪಾಸ್‌ಕೋಡ್' ವ್ಯವಸ್ಥೆಯನ್ನು ಬಳಸಿಕೊಂಡು, ದೇಹಕ್ಕೆ ಕಟ್ಟಿಕೊಂಡಿದ್ದ ಚಿನ್ನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ನಿರ್ಬಂಧಿತ ವಲಯಗಳಿಗೆ ಇರುವ ಅಧಿಕೃತ ಪ್ರವೇಶವನ್ನು ದುರುಪಯೋಗಪಡಿಸಿಕೊಂಡು ಚಿನ್ನವನ್ನು ಹೊರಗೆ ಸಾಗಿಸಲು ಸಹಾಯ ಮಾಡುತ್ತಿದ್ದ ವಿಮಾನ ನಿಲ್ದಾಣದ ಒಳಗಿನ ವ್ಯಕ್ತಿಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ತನಿಖೆಯ ಪ್ರಕಾರ, ಈ ಜಾಲವು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಿಕೊಂಡಿದ್ದು, ಬಾಂಗ್ಲಾದೇಶದ ಪ್ರಜೆಗಳು ಸ್ಥಳೀಯ ಏಜೆಂಟ್‌ಗಳೊಂದಿಗೆ ಸೇರಿ ಈ ಕೃತ್ಯ ಎಸಗುತ್ತಿದ್ದರು. ಇವರು ಪತ್ತೆಯಾಗುವುದನ್ನು ತಪ್ಪಿಸಲು ಎನ್‌ಕ್ರಿಪ್ಟೆಡ್ ಕಮ್ಯುನಿಕೇಶನ್ ಮತ್ತು ಕಣ್ಮರೆಯಾಗುವ ಸಂದೇಶಗಳ ಮೂಲಕ ಸಂವಹನ ನಡೆಸುತ್ತಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಈ ದಂಧೆಯ ಹಿಂದಿರುವ ಮಾಸ್ಟರ್ ಮೈಂಡ್ ಹಾಗೂ ಉಳಿದ ಜಾಲವನ್ನು ಮಟ್ಟಹಾಕಲು ಡಿಆರ್‌ಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.












Click it and Unblock the Notifications