GBA: ಬೆಂಗಳೂರಿನಲ್ಲಿ ಅನಧಿಕೃತ - ಶಿಥಿಲಾವಸ್ಥೆಯ ಕಟ್ಟಡಗಳ ಆಸ್ತಿ ಮಾಲೀಕರಿಗೆ ಜಿಬಿಎ ಕೊನೆಯ ಎಚ್ಚರಿಕೆ
GBA: ಬೆಂಗಳೂರಿನಲ್ಲಿ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ, ಮಳೆಗಾಲ ಪೂರ್ವ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ಪುಲಿಕೇಶಿನಗರ ವಿಭಾಗ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಹಾಗೂ ಅಪಾಯಕಾರಿ ಕಾಂಪೌಂಡ್ ಗೋಡೆಗಳ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಸೂಚನೆ ನೀಡಲಾಗಿದೆ. ಇದರೊಂದಿಗೆ ವಿವಿಧ ಪ್ರದೇಶಗಳಲ್ಲಿಯೂ ಸಹ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಎಚ್ಚರಿಕೆ ಕೊಡಲಾಗಿದೆ.
ಪುಲಿಕೇಶಿನಗರ ವಿಭಾಗದ ವಾರ್ಡ್‌ಗಳಾದ ಶ್ಯಾಂಪುರ, ಕಾವಲ್‌ಭೈರಸಂದ್ರ, ಶಕ್ತಿನಗರ, ಪೆರಿಯಾರ್ ನಗರ, ಅರುಣ್ ಆಸಿಫ್ ಅಲಿ, ವರಲಕ್ಷ್ಮೀನಗರ, ದೊಡ್ಡಣ್ಣನಗರ, ಕುಶಾಲನಗರ, ಸಗಾಯಪುರಂ, ಪುಲಿಕೇಶಿನಗರ ಹಾಗೂ ಎಸ್.ಕೆ. ಗಾರ್ಡನ್ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳು, ಕಾಂಪೌಂಡ್ ಗೋಡೆಗಳು ಸೇರಿದಂತೆ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡ ಮತ್ತು ಗೋಡೆಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರಿಗೆ ಅಪಾಯ ಉಂಟುಮಾಡಬಹುದಾದ ಶಿಥಿಲಾವಸ್ಥೆಯ ಕಟ್ಟಡಗಳು ಅಥವಾ ಗೋಡೆಗಳು ಕಂಡುಬಂದಲ್ಲಿ ತಕ್ಷಣ ಪುಲಿಕೇಶಿನಗರ ವಿಭಾಗದ ಅಧಿಕಾರಿಗಳಿಗೆ ದೂರವಾಣಿ ಅಥವಾ ವಾಟ್ಸಾಪ್ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಖಾಸಗಿ ಶಾಲೆಗಳು, ಖಾಸಗಿ ಕಟ್ಟಡಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಾಂಪೌಂಡ್ ಗೋಡೆಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದಲ್ಲಿ, ಸಂಬಂಧಪಟ್ಟ ಮಾಲೀಕರು ತಮ್ಮ ಸ್ವಂತ ವೆಚ್ಚದಲ್ಲಿ ತಕ್ಷಣ ತೆರವುಗೊಳಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಲಾಗಿದೆ. ನಿಯಮ ಪಾಲಿಸದ ಪರಿಣಾಮ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸಿದಲ್ಲಿ ಸಂಬಂಧಪಟ್ಟ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಸಂಪರ್ಕಕ್ಕಾಗಿ
ಕಾರ್ಯಪಾಲಕ ಎಂಜಿನಿಯರರು - ತಿಪ್ಪೇಸ್ವಾಮಿ: 9538004111
ಸಹಾಯಕ ಕಾರ್ಯಪಾಲಕ ಎಂಜಿನಿಯರರು - ದೇವರಾಜಯ್ಯ ಕೆ.ಬಿ.: 9886153161
ಸಹಾಯಕ ಕಾರ್ಯಪಾಲಕ ಎಂಜಿನಿಯರರು - ಕೃಷ್ಣಪ್ಪ ವಿ.ಆರ್.: 8867196994
ಸಹಾಯಕ ಕಾರ್ಯಪಾಲಕ ಎಂಜಿನಿಯರರು - ರಾಘವೇಂದ್ರ: 9845730883
ಬೆಂಗಳೂರು ಉತ್ತರ ನಗರ ಪಾಲಿಕೆ ಮಳೆಗಾಲ ಪೂರ್ವ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಿ ನಿರಂತರ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications