GBA: ಪಾದಚಾರಿಗಳ ಸುರಕ್ಷತೆಗೆ ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ "ಪ್ರಾಜೆಕ್ಟ್ ವಾಕಲೂರು"
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರಿನ ಉತ್ತರ ನಗರ ಪಾಲಿಕೆಯು ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಸಂಚಾರ ಹಾಗೂ ನಡೆದು ಹೋಗಬಹುದಾದ ರಸ್ತೆಗಳ ಮಹತ್ವವನ್ನು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ವತಿಯಿಂದ ವಾಕಲೂರು ಯೋಜನೆಯ 9ನೇ ಫುಟ್ಪಾತ್ ವಾಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
5.2 ಕಿಮೀ ಫುಟ್ಪಾತ್ ವಾಕ್ ಕಾರ್ಯಕ್ರಮವು ಬೆಂಗಳೂರಿನ ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸರ್ವಜ್ಞನಗರ ವಿಭಾಗದ ಕಮ್ಮನಹಳ್ಳಿ ಪ್ರದೇಶದಲ್ಲಿ ನಡೆಯಲಿದ್ದು, ಸ್ಥಳೀಯ ವಾಕೆಬಿಲಿಟಿಯನ್ನು ಸ್ಥಳದಲ್ಲೇ ಪರಿಶೀಲಿಸಿ, ಸುಧಾರಣೆ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಫುಟ್ಪಾತ್ ವಾಕ್ ಕಾರ್ಯಕ್ರಮವು ಜನವರಿ 10ರಂದು (ಶನಿವಾರ) ಬೆಳಿಗ್ಗೆ 7.30ಕ್ಕೆ, ಕಮ್ಮನಹಳ್ಳಿ ಮುಖ್ಯ ರಸ್ತೆಯ ಜೋಯಲುಕಾಸ್‌ನಿಂದ ಆರಂಭವಾಗಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 29 ಕಿ.ಮೀ. ಫುಟ್ಪಾತ್ ವಾಕ್ ಪೂರ್ಣವಾಗಿದೆ. ಈಗಾಗಲೇ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬಾಣಸವಾಡಿಯಲ್ಲಿ 5 ಕಿ.ಮೀ., ಥಣಿಸಂದ್ರದಲ್ಲಿ 7 ಕಿ.ಮೀ., ಯಲಹಂಕದಲ್ಲಿ 10 ಕಿ.ಮೀ. ಮತ್ತು ಹೆಬ್ಬಾಳದ ಆರ್ ಟಿ ನಗರದಲ್ಲಿ 7 ಕಿ.ಮೀ., ಹಾಗೂ ಹೊಸ ವರ್ಷದ ಆರಂಭದ ದಿನದಂದು ಜೆ.ಸಿ. ನಗರ ದಿಂದ ಮೇಖ್ರಿ ವೃತ್ತ ಪ್ರದೇಶಗಳಲ್ಲಿ ಪಾದಚಾರಿ ನಡಿಗೆಯನ್ನು ಕೈಗೊಳ್ಳಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 29 ಕಿ.ಮೀ. ಪಾದಚಾರಿ ನಡಿಗೆಯನ್ನು ಕೈಗೊಂಡು, ಮೌಲ್ಯಮಾಪನ ಮಾಡಲಾಗಿರುತ್ತದೆ.
ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸುವ ಮೂಲಕ, ಸುಸ್ಥಿರ ಹಾಗೂ ಸುರಕ್ಷಿತ ಪಾದಚಾರಿಗಳ ಮೂಲಸೌಕರ್ಯ ನಿರ್ಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಈ ವಾಕ್ ಒಂದು ಮಹತ್ವದ ಹೆಜ್ಜೆಯಾಗಲಿದೆ. ನಗರದ ಅಭಿವೃದ್ಧಿಗೆ ಬದ್ಧವಾಗಿರುವ ನಗರ ಪಾಲಿಕೆಯ ತಂಡದೊಂದಿಗೆ ಸೇರಿ, ನೆರೆಯವರೊಂದಿಗೆ ನಡೆದು, ನಿಮ್ಮ ಪ್ರದೇಶದಲ್ಲಿ ಉತ್ತಮ ಹಾಗೂ ಸುರಕ್ಷಿತ ಪಾದಚಾರಿಗಳ ಸ್ಥಳಗಳನ್ನು ನಿರ್ಮಿಸಲು ನೀವು ಸಹ ಪ್ರಮುಖ ಪಾತ್ರವಹಿಸಬಹುದು ಎಂದು ಪಾಲಿಕೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಗ: ಇನ್ನು ಫುಟ್ಪಾತ್ ವಾಕ್ ಪ್ರಾರಂಭವಾಗುವ ಮಾರ್ಗ ವಿವರ ಈ ರೀತಿ ಇದೆ. ಕಮ್ಮನಹಳ್ಳಿ ಮುಖ್ಯ ರಸ್ತೆಯ ಜೋಯಲುಕಾಸ್‌ನಿಂದ ಪ್ರಾರಂಭವಾಗಿ, ಮರಿಯಪ್ಪ ವೃತ್ತ - ಮರಿಯಪ್ಪ ವೃತ್ತದ ಎಡಭಾಗದಿಂದ ಸಿಎಂಆರ್ ರಸ್ತೆ - ಬಾಣಸವಾಡಿ ಕ್ಲಬ್ ವರೆಗೆ, ಯೂ-ಟರ್ನ್ ಪಡೆದು ಮರಿಯಪ್ಪ ವೃತ್ತದ ಕಡೆಗೆ - ಎಡಭಾಗದಿಂದ ಕಮ್ಮನಹಳ್ಳಿ ಮುಖ್ಯ ರಸ್ತೆ ಮೂಲಕ ಎಂಪೈರ್ ಸಿಗ್ನಲ್‌ವರೆಗೆ - ಅಲ್ಲಿಂದ ಎಡಭಾಗದಿಂದ ಸಿಎಂಆರ್ ರಸ್ತೆ - ಯೂ-ಟರ್ನ್ ಪಡೆದು ಹೆಣ್ಣೂರು ರಸ್ತೆ ಮೂಲಕ ಮರಿಯಪ್ಪ ವೃತ್ತ - ಮರಿಯಪ್ಪ ವೃತ್ತದ ಎಡಭಾಗದಿಂದ ಕಮ್ಮನಹಳ್ಳಿ ಮುಖ್ಯ ರಸ್ತೆಯ ಜೋಯಲುಕಾಸ್‌ವರೆಗೆ ಇರಲಿದೆ.












Click it and Unblock the Notifications