ಮಾಜಿ ಮುಖ್ಯಮಂತ್ರಿ ಪುತ್ರ ಆದ್ರೂ ದಿನೇಶ್ ಗುಂಡೂರಾವ್ 'ಜಸ್ಟ್ ಪಾಸ್'
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನೇಶ್ ಗುಂಡೂರಾವ್ ಪ್ರಯಾಸದ ಗೆಲುವು ಸಾಧಿಸಿದ್ದಾರೆ.
ತೀವ್ರ ಪೈಪೋಟಿ ನೀಡಿದ ಬಿಜೆಪಿ ಅಭ್ಯರ್ಥಿ ಎ.ಆರ್.ಸಪ್ತಗಿರಿಗೌಡ ಕೊಂಚ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದಿನೇಶ್ ಗುಂಡೂರಾವ್ 53,980 ಹಾಗೂ ಬಿಜೆಪಿ ಅಭ್ಯರ್ಥಿ 53,867 ಮತಗಳನ್ನು ಪಡೆದಿದ್ದಾರೆ. ಇವರ ಗೆಲುವಿನ ಅಂತರವನ್ನು ಕೇವಲ '113' ಮತಗಳು.

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,23,259 ಮತದಾರರಿದ್ದು, ಶೇಕಡ 50.3% ಮತದಾನವಾಗಿತ್ತು. ಸತತ ಐದು ಬಾರಿ ಗೆಲುವು ಸಾಧಿಸಿದ್ದ ದಿನೇಶ್, 6ನೇ ಬಾರಿಗೆ ಕಣಕ್ಕೆ ಇಳಿದಿದ್ದರು. ಸ್ವಲ್ಪದಲ್ಲಿಯೇ ಸೋಲಿನಿಂದ ಪಾರಾಗಿದ್ದಾರೆ. ಅವರ ವಿರುದ್ದ ಜೆಡಿಎಸ್‌ನಿಂದ ವಿ.ನಾರಾಯಣಸ್ವಾಮಿ, ಬಿಜೆಪಿ ಟಿಕೆಟ್ ವಂಚಿತ ಮಾಜಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿ, ಪೈಪೋಟಿ ನೀಡಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ವಿರುದ್ಧ 10 ಸಾವಿರ ಮತಗಳ ಅಂತರದಿಂದ ದಿನೇಶ್ ಜಯಗಳಿಸಿದ್ದರು. ಆದರೆ, ಈ ಬಾರಿ ಎಲೆಕ್ಷನ್ ನಲ್ಲಿ ಆ ಸಂಖ್ಯೆ ತೀರಾ ಅಂದರೆ ತೀರಾ ಕಡಿಮೆ ಇತ್ತು. 1999ರಲ್ಲಿ ಮೊದಲ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಇದೀಗ ಸತತ ಆರನೇ ಬಾರಿಗೆ ವಿಜಯಶಾಲಿಯಾಗಿದ್ದಾರೆ.
ಅಂತೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಪ್ರಬಲ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸದಲ್ಲಿ ದಿನೇಶ್ ಗುಂಡೂರಾವ್ ಇದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ, ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿ ಅಧಿಕಾರ ಹಿಡಿಯುವತ್ತ ಮುನ್ನುಗುತ್ತಿದ್ದು, ಆಡಳಿತರೂಢ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕೂರುವಂತಾಗಿದೆ.












Click it and Unblock the Notifications