ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಹತ್ಯೆ: ನಾಲ್ವರ ಬಂಧನ
ಬೆಂಗಳೂರು, ಡಿಸೆಂಬರ್ 12: ಬಿಬಿಎಂಪಿ ಮಾಜಿ ಜೆಡಿಎಸ್ ಕಾರ್ಪೊರೇಟರ್ ಗೋವಿಂದೇಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿ, ಸುದೀಪ್, ರಾಜಶೇಖರ್ ಮತ್ತು ವೇಲು ಎನ್ನುವರನ್ನು ಹೆಗ್ಗನಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಜೆಡಿಎಸ್ ನಾಯಕ, ಹೆಗ್ಗನಹಳ್ಳಿಯ ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ (59) ಅವರನ್ನು ಶನಿವಾರ (ಡಿಸೆಂಬರ್ 9) ಸಂಜೆ ರಾಜಗೋಪಾಲನಗರದ ಹೆಗ್ಗನಹಳ್ಳಿ ಕ್ರಾಸ್ ಬಳಿ ಹತ್ಯೆ ನಡೆದಿತ್ತು.

ಗೋವಿಂದೇಗೌಡ ಹತ್ಯೆ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಅವರು ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಿದ್ದರು.
2016ರಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಹತ್ಯೆ ಪ್ರಕರಣದಲ್ಲಿ ಕೊಲೆಯಾದ ಗೋವಿಂದೇಗೌಡ ಆರೋಪಿಯಾಗಿದ್ದರು.
ಇದೇ ದ್ವೇಷದ ಹಿನ್ನೆಲೆಯಲ್ಲಿ ಗೋವಿಂದೇಗೌಡ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇದೀಗ ನಾಲ್ವರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ ಬಳಿಕ ಕೊಲೆಗೆ ಕಾರಣ ಏನು ಎಂಬುವುದು ತಿಳಿಯಲಿದೆ.












Click it and Unblock the Notifications