Bengaluru: ಅನ್ನನಾಳ ಸುಟ್ಟಿದ್ದ 6 ವರ್ಷದ ಬಾಲಕಿಗೆ ಫೋರ್ಟಿಸ್ ಆಸ್ಪತ್ರೆಯಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು, ಜುಲೈ 24: ಫ್ಲೋರ್ ಕ್ಲೀನರ್ ಲಿಕ್ವಿಡ್ ಕುಡಿದು ಅನ್ನನಾಳವೇ ಸಂಪೂರ್ಣವಾಗಿ ಕಳೆದುಕೊಂಡಿದ್ದ ಮಗುವಿಗೆ ಜೀವದಾನ ಸಿಕ್ಕಿದೆ. ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಚೂರು ಯಡವಟ್ಟಾದರೂ ಹೀಗೆ ಅಪಾಯ ಎದುರಾಗುತ್ತದೆ. ತಂತ್ರಜ್ಞಾನದ ಸಹಾಯದಿಂದ ಮಗುವಿನ ಅನ್ನನಾಳವನ್ನು ಯಶಸ್ವಿಯಾಗಿ ಪುನರ್ ಜೋಡಣಾ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಆರು ವರ್ಷದ ಪುಟ್ಟ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಫ್ಲೋರ್ ಕ್ಲೀನರ್ ಲಿಕ್ವಿಡ್ ಕುಡಿದ ಪರಿಣಾಮ ಅನ್ನನಾಳವೇ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಈ ಬಾಲಕಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಅನ್ನನಾಳವನ್ನು ಬಾಲಕಿ ದೇಹದಲ್ಲಿ ಪುನರ್ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಮುಖ್ಯಸ್ಥ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಶ್ ಜೋಶಿ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು. ಈ ಕುರಿತು ಮಾತನಾಡಿದ ಅವರು, ಈ ಪುಟ್ಟ ಬಾಲಕಿಯು ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಫ್ಲೋರ್ ಕ್ಲೀನರ್‌ನಲ್ಲಿ ಆಕಸ್ಮಿಕವಾಗಿ ಸೇವಿಸಿದೆ. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣ ಕರುಳಿನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮೊದಲು ಸಣ್ಣ ಕರುಳಿಗೆ ಜೋಡಣೆ
ಆದರೆ ಅನ್ನನಾಳ ಹಾಗೂ ಸಣ್ಣ ಕರುಳು ಸಂಪೂರ್ಣ ಸುಟ್ಟು ಹೋದ ಪರಿಣಾಮ, ಹಾನಿಗೊಳಗಾದ ಆಹಾರ ಪೈಪ್‌ನ ಒಂದು ಭಾಗವನ್ನು ತೆಗೆದು, ಟ್ಯೂಬ್ ಮೂಲಕ ಅವಳ ಸಣ್ಣ ಕರುಳಿಗೆ ನೇರವಾಗಿ ಆಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗಿತು.

ಕಳೆದ ಎರಡು ವರ್ಷಗಳಿಂದ ದೇಹದ ಹೊರಭಾಗದಿಂದ ಹೆಚ್ಚುವರಿಯಾಗಿ ಫೀಡಿಂಗ್ ಟ್ಯೂಬ್ ಅಳವಡಿಸಿದ್ದು, ಅದರ ಸಹಾಯದಿಂದಲೇ ಆಹಾರ ಸೇವನೆ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದೂ ಸಹ ಮಗುವಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಬಾಲಕಿಯನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು.
ಅನ್ನನಾಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು ಹೇಗೆ
ಓಸೊಫಾಗೊ-ಗ್ಯಾಸ್ಟ್ರೋ-ಡ್ಯುಯೊಡೆನೊಸ್ಕೋಪಿಗೆ ಒಳಪಡಿಸಿ, ಮೇಲ್ಭಾಗದ ಜೀರ್ಣಾಂಗ ವ್ಯವಸ್ಥೆಯನ್ನು ಮೈಕ್ರೋ ಕ್ಯಾಮೆರಾದ ಮೂಲಕ ಪರೀಕ್ಷಿಸಲಾಯಿತು. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣಕರುಳು, ಸುಟ್ಟ ಪರಿಣಾಮ ತೀರ ಕಿರಿದಾಗಿತ್ತು. ಹೀಗಾಗಿ ಅನ್ನನಾಳದ ಪುನರ್ ನಿರ್ಮಾಣಕ್ಕೆ ಮಕ್ಕಳ ತಜ್ಞರು ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು, ಅರವಳಿಕೆ ತಜ್ಞರ ಸಹಕಾರದೊಂದಿಗೆ ಮಗುವಿನ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಈಗಾಗಲೇ ಸಂಪೂರ್ಣವಾಗಿ ಸುಟ್ಟು, ಕಿರಿದಾಗಿದ್ದ ಅನ್ನನಾಳವನ್ನು ತೆರವುಗೊಳಿಸಿ, ಟ್ಯೂಬ್‌ನನ್ನು ನೇರವಾಗಿ ಮಗುವಿನ ಸಣ್ಣ ಕರುಳಿಗೆ ಅಳವಡಿಸಲಾಗಿದೆ. ಈ ಮೂಲಕ ಅನ್ನನಾಳವನ್ನು ಮರುನಿರ್ಮಾಣ ಮಾಡಲಾಗಿದೆ. ಇದರಿಂದ ಇದೀಗ ಮಗುವು ಯಾವುದೇ ಟ್ಯೂಬ್ ಇಲ್ಲದೆಯೂ ಸಹ ಆಹಾರವನ್ನು ಬಾಯಿಯ ಮೂಲಕ ಸೇವಿಸಬಹುದಾಗಿದೆ ಎಂದು ಅವರು ವಿವರಿಸಿದರು.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಅವರು, ಆರು ವರ್ಷದ ಬಾಲಕಿಗೆ ಮರುಜೀವ ನೀಡುವಲ್ಲಿ ನಮ್ಮ ವೈದ್ಯರು ಶ್ರಮವನ್ನು ಅವರು ಶ್ಲಾಘೀಸಿದರು. ನಮ್ಮ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳಿಂದ ಯಾವುದೇ ಸವಾಲಿನ ಪ್ರಕರಣಗಳಾದರೂ ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಯಾವ ವಯಸ್ಸಿನ ಪ್ರಕರಣಗಳೇ ಆದರೂ ಅದನ್ನು ನಿಭಾಯಿಸಲು ಸಮರ್ಥವಾಗಿದ್ದೇವೆ ಎಂದು ಅವರು ತಿಳಿಸಿದರು. ಮಗಳ ಯಶಸ್ವಿ ಚಿಕಿತ್ಸೆಯಿಂದ ಬಾಲಕಿಯ ಪೋಷಕರ ಮೊಗದಲ್ಲಿ ಸಂತಸ ಮೂಡಿದೆ.












Click it and Unblock the Notifications