ಗ್ಯಾರಂಟಿಗಳಲ್ಲಿ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ಗ್ಯಾರಂಟಿಗಳನ್ನು ಮಾಡುವಲ್ಲಿ ಜನರಿಗೆ ಮೋಸ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಚುನಾವಣೆಗೆ ಮೊದಲು ಅವರು ಹೇಳಿದ್ದಕ್ಕೂ ಈಗ ಜಾರಿ ಮಾಡುತ್ತಿರುವುದಕ್ಕೂ ಭಾರಿ ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದ್ದಾರೆ. ಗ್ಯಾರಂಟಿ ಘೋಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಿಸಿದರು.
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದರು, ಆದರೆ ಈಗ 12 ತಿಂಗಳ ಸರಾಸರಿ ಬಳಕೆ ಆಧಾರದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣ ಈಗ ಬಯಲಾಗಿದೆ. ಅವರ ಹಿಡನ್ ಅಜೆಂಡಾಗಳು ಬಹಿರಂಗವಾಗಿವೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಜನರಿಗೆ ಮೋಸ ಮಾಡುತ್ತಾರೆ ಎಂದು ಮೊದಲೇ ಹೇಳಿದ್ದೆ, ಈಗ ಅದನ್ನೇ ಮಾಡಿದೆ. ಕೇಂದ್ರ ಸರ್ಕಾರ ಉಚಿತವಾಗಿ ತಲಾ 5 ಕೆಜಿ ಅಕ್ಕಿ ಕೊಡುತ್ತಿದೆ. ಉಳಿದ 5 ಕೆ.ಜಿ. ಅಕ್ಕಿಯನ್ನು ಕಾಂಗ್ರೆಸ್ ಸರ್ಕಾರ ಕೊಡುತ್ತಿದೆ. 10 ಕೆಜಿಯಲ್ಲಿ ಜೋಳ, ರಾಗಿ ಸೇರಿದೆಯಾ, ಹೆಚ್ಚುವರಿಯಾಗಿ ಕೊಡ್ತಿದ್ದಾರಾ ಎನ್ನುವ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಅನ್ನಭಾಗ್ಯ ಯೋಜನೆ ಯೋಜನೆ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳಿಲ್ಲ, 10 ಕೆಜಿಯಲ್ಲಿ ಅಕ್ಕಿ ಜೊತೆ ರಾಗಿ, ಜೋಳ ಇದೆಯಾ, ಇಲ್ಲವಾ ಸ್ಪಷ್ಟವಾಗಿಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲೂ ಮೋಸ
ಗೃಹಲಕ್ಷ್ಮೀ ಯೋಜನೆ ಜಾರಿ ಮಾಡುವಲ್ಲಿ ಕೂಡ ಭಾರಿ ಮೋಸ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಆನ್‌ಲೈನ್ ಅರ್ಜಿ ಸಲ್ಲಿಕೆ ವೇಳೆ ಅರ್ಧ ಫಲಾನುಭವಿಗಳನ್ನು ಯೋಜನೆಯಿಂದ ಹೊರಗುಳಿಯುವಂತೆ ಮಾಡುತ್ತಾರೆ. ಗ್ರಾಮ ಪಂಚಾಯಿತಿ, ಪಿಡಿಒ ಸಹಾಯ ಪಡೆದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬಹುದಿತ್ತು ಎಂದರು.
ಆಗಸ್ಟ್‌ನಿಂದ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳಿದ್ದಾರೆ. ಜೂನ್, ಜುಲೈ ತಿಂಗಳ ಹಣವನ್ನು ಸೇರಿಸಿ ಕೊಡುತ್ತಾರಾ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದು ವೇಳೆ ಕೊಡದೇ ಇದ್ರೆ, ಜೂನ್, ಜುಲೈ ತಿಂಗಳ ಹಣ ಏನಾಗುತ್ತದೆ. ಇದನ್ನು ಪಡೆಯಲು ಇನ್ನು ಯಾವ ಷರತ್ತುಗಳನ್ನು ಹಾಕುತ್ತಾರೆ ಗೊತ್ತಿಲ್ಲ ಎಂದರು.
ಮಹಿಳೆಯರಿಗೆ ಉಚಿತ ಪ್ರಯಾಣ ಅಂದವರು ಈಗ ರಾಜಹಂಸ, ಎಸಿ ಬಸ್‌ನಲ್ಲಿ ಉಚಿತ ಪ್ರಯಾಣ ಇಲ್ಲ, ಬರೀ ಕೆಂಪು ಬಸ್ಸಿನಲ್ಲಿ ಮಾತ್ರ ಎಂದಿದ್ದಾರೆ. ಯೋಜನೆ ಜಾರಿ ಮಾಡುವಲ್ಲಿ ಕೂಡ ಗೊಂದಲವಿದೆ, ಅಧಿಕೃತ ಆದೇಶ ಬಂದಾಗ ನಿಜವಾದ ಬಂಡವಾಳ ತಿಳಿಯುತ್ತದೆ ಎಂದು ಹೇಳಿದರು.
ದುಡ್ಡು ಎಲ್ಲಿಂದ ತರ್ತಾರೆ ಎಂದು ಹೇಳಿಲ್ಲ
5 ಗ್ಯಾರಂಟಿ ಯೋಜನೆಗಳ ಖರ್ಚು ವೆಚ್ಚದ ಬಗ್ಗೆ ಸಿದ್ದರಾಮಯ್ಯ ಮಾಹಿತಿ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಯೋಜನೆಗಳನ್ನು ನಿಲ್ಲಿಸುತ್ತಾರ ಎಂದು ಪ್ರಶ್ನೆ ಮಾಡಿದರು. ರಾಜ್ಯದ ಜನರ ತೆರಿಗೆ ಹಣ ಅಭಿವೃದ್ಧಿ ಯೋಜನೆಗಳಿಗೆ ಖರ್ಚು ಮಾಡಬೇಕು, ಆದಾಯ ಸೃಷ್ಟಿಸದಿದ್ದರೆ ರಾಜ್ಯದ ಆರ್ಥಿಕತೆಗೆ ತೊಂದರೆಯಾಗಲಿದೆ. ಸರ್ಕಾರ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲಿ ಎಂದು ಹೇಳಿದರು.












Click it and Unblock the Notifications