ಚೀನಾದಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಪತ್ತೆ?
ಬೆಂಗಳೂರು, ಜನವರಿ 27: ಮಾರಣಾಂತಿಕ ಕೊರೊನಾ ವೈರಸ್ ಇಡೀ ವಿಶ್ವದಲ್ಲೇ ಆತಂಕ ಸೃಷ್ಟಿಸಿದೆ.
ಈಗ ಬೆಂಗಳೂರಿನಲ್ಲೂ ಕರೋನಾ ವೈರಸ್ನ ಭೀತಿ ಎದುರಾಗಿದ್ದು, ವುಹಾನ್ನಿಂದ ಬಂದ ಇಬ್ಬರು ವ್ಯಕ್ತಿಗಳಿಗೆ ಕರೋನಾ ಸೋಂಕು ತಗುಲಿರುವ ಅನುಮಾನ ಬಂದಿದ್ದರಿಂದ ಅವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.
ನಿನ್ನೆ ರಾತ್ರಿ ವುಹಾನ್ನಿಂದ ಬೆಂಗಳೂರಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿ ಕಳುಹಿಸಲಾಗಿತ್ತು. ಆದರೆ, ಆ ಇಬ್ಬರು ಪ್ರಯಾಣಿಕರಿಗೆ ನೆಗಡಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ.

ಚೀನಾದಲ್ಲಿ ಸಾವಿನ ಭೀತಿಯನ್ನು ಸೃಷ್ಟಿಸಿರುವ ಕರೋನಾ ಎಂಬ ಮಾರಣಾಂತಿಕ ವೈರಸ್ ಬಗ್ಗೆ ವಿಶ್ವದೆಲ್ಲೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯಕ್ಕೆ ಭಾರತದಲ್ಲಿ ಕರೋನಾ ವೈರಸ್ಗೆ ತುತ್ತಾದ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಸರ್ಕಾರ ತಿಳಿಸಿದೆ.
ಬೆಂಗಳೂರು ಮೂಲದ ಇಬ್ಬರು ಪ್ರಯಾಣಿಕರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ನಾಳೆ ರಕ್ತದ ಮಾದರಿಯ ಫಲಿತಾಂಶ ಸಿಗಲಿದೆ.
ವರದಿ ಬರುವವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಆ ಇಬ್ಬರನ್ನು ಆಸ್ಪತ್ರೆಯಲ್ಲೇ ದಾಖಲು ಮಾಡಲಾಗುವುದು. ಇದುವರೆಗೆ ಚೀನಾದಿಂದ ನಾನಾ ಭಾಗಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ 392 ಪ್ರಯಾಣಿಕರ ರಕ್ತ ಪರೀಕ್ಷೆ ಮಾಡಲಾಗಿದೆ.












Click it and Unblock the Notifications