ಮಾಜಿ ಸಚಿವ ಅಶ್ವಥ್ ನಾರಾಯಣ ವಿರುದ್ಧ FIR ದಾಖಲು: ದ್ವೇಷ ರಾಜಕಾರಣ ಬಿಡಿ ಎಂದು ಶಾಸಕ ಕಿಡಿ
ಬೆಂಗಳೂರು, ಮೇ 25: ಚುನಾವಣೆ ಪ್ರಚಾರದ ವೇಳೆ ನೀಡಿದ ಹೇಳಿಕೆಯನ್ನು ಇಟ್ಟುಕೊಂಡು ಅಧಿಕಾರಕ್ಕೆ ಬಂದ ಕೂಡಲೇ ನನ್ನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಮತ್ತು ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ ಕಿಡಿ ಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಗುರುವಾರ ಮಾತನಾಡಿದ ಅವರು, ಕಳೆದ ಫೆಬ್ರುವರಿಯಲ್ಲಿ ನೀಡಿದ್ದ ಹೇಳಿಕೆ ಸಂಬಂಧವಾಗಿ ನಾನು ಈಗಾಗಲೇ ಸದನದಲ್ಲೇ ಸ್ಪಷ್ಟನೆ ನೀಡಿದ್ದೇನೆ. ಈ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಅಂತಲೂ ತಿಳಿಸಿದ್ದೇನೆ. ಹೀಗಿದ್ದರೂ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನಾಲ್ಕು ತಿಂಗಳ ಹಿಂದಿನ ಹೇಳಿಕೆಯನ್ನು ನೆಪವಾಗಿಸಿಕೊಂಡು ಎಫ್ಐಆರ್ ದಾಖಲಾಗುವಂತೆ ಮಾಡಿದೆ ಎಂದರು.

ನನಗೂ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರ ಬಗ್ಗೆ ಗೌರವ ಇದೆ. ಆದರೆ, ಸೈದ್ಧಾಂತಿಕವಾಗಿ ನಮ್ಮ ಹಾಗೂ ಅವರ ಪಕ್ಷಗಳ ನಡುವೆ ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ನಾನು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ಗೆ ಅಧಿಕಾರ ನೆತ್ತಿಗೇರಿದೆ
ಕರ್ನಾಟಕದ ಜನರು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಅದನ್ನು ತಿಳಿದು ಸಮಯ ಮತ್ತು ಶ್ರಮವನ್ನು ಜನಪರ ಕೆಲಸಗಳಿಗೆ ಬಳಸಬೇಕು. ಅದಕ್ಕೆ ಬದಲಾಗಿ ದ್ವೇಷದ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಎರಡೇ ವಾರದಲ್ಲಿ ಕಾಂಗ್ರೆಸಿಗೆ ಅಧಿಕಾರ ನೆತ್ತಿಗೇರಿರುವುದನ್ನು ಇದು ತೋರಿಸುತ್ತದೆ. ದ್ವೇಷ ರಾಜಕಾರಣ ಬಿಟ್ಟು ಅದೇ ಸಮಯ ರಾಜ್ಯ ಅಭಿವೃದ್ಧಿಗೆ ಮೀಸಲಿಡಿ ಎಂದು ವಾಗ್ದಾಳಿ ನಡೆಸಿದರು.

ಇಷ್ಟಕ್ಕೂ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ, ನನ್ನ ಹೇಳಿಕೆ ವಿರುದ್ಧ ದೂರು ಏಕೆ ದಾಖಲಿಸಲಿಲ್ಲ?. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡ ನಂತರ ದೂರು ದಾಖಲಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂಬುದು ತೋರಿಸುತ್ತದೆ.
ಅಷ್ಟೇ ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ ಒಂದು ವಾರ ಆಗಿಲ್ಲ, ಆಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಇದು ಕೂಡ ಸರ್ಕಾರದ ಆದ್ಯತೆ ಏನು ಎನ್ನುವುದನ್ನು ತೋರಿಸುತ್ತದೆ. ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುವುದರ ಕಡೆಗೆ ಸರ್ಕಾರ ಗಮನ ಕೊಡಲಿ. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications