ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಟ್ವೀಟ್: ಬಿಜೆಪಿ ನಾಯಕ ಅಮಿತ್ ಮಾಳವಿಯಾ ವಿರುದ್ಧ ಎಫ್‌ಐಆರ್ ದಾಖಲು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಕಾಂಗ್ರೆಸ್ ಮುಖಂಡ ರಮೇಶ್ ಬಾಬು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A 120b 505(2), 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆ್ಯನಿಮೇಟೆಡ್ ವೀಡಿಯೋ ಒಂದರಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಭಾರಿ ವಿರೋಧ ವ್ಯಕ್ತಪಡಿಸಿತ್ತು. ರಾಹುಲ್ ಗಾಂಧಿಯನ್ನು ಅವಮಾನಿಸುವ ದುರುದ್ದೇಶದಿಂದ ಟ್ವೀಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಮಿತ್ ಮಾಳವಿಯಾ ಮಾಡಿರುವ ಟ್ವೀಟ್‌ನಲ್ಲಿ "ರಾಹುಲ್ ಗಾಂಧಿ ಅಪಾಯಕಾರಿ ಮತ್ತು ಕಪಟ ನಾಟಕ ಆಡುತ್ತಿದ್ದಾರೆ. ಇವರು ಹೆಚ್ಚು ಅಪಾಯಕಾರಿ. ರಾಹುಲ್ ಗಾಂಧಿ ಭಾರತವನ್ನು ಕಟುವಾಗಿ ವಿರೋಧಿಸುತ್ತಾರೆ. ನರೇಂದ್ರ ಮೋದಿಯವರಿಗೆ ವಿದೇಶದಲ್ಲಿ ಮುಜುಗರ ಉಂಟುಮಾಡಲು, ಭಾರತದ ವಿರುದ್ಧವೇ ಮಾತನಾಡುತ್ತಾರೆ" ಎಂದು ಹೇಳಿದ್ದರು.
ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ಅಮಿತ್ ಮಾಳವೀಯ ವಿರುದ್ಧದ ಎಫ್‌ಐಆರ್‌ಗೆ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ, "ಬಿಜೆಪಿಯವರುಕಾನೂನು ಎಂದಾಗ ಕಣ್ಣೀರು ಹಾಕುತ್ತಾರೆ. ದೇಶದ ಕಾನೂನನ್ನು ಪಾಲಿಸಲು ಅವರಿಗೆ ಸಮಸ್ಯೆ ಇದೆ. ಎಫ್‌ಐಆರ್‌ನ ಯಾವ ಭಾಗವನ್ನು ದುರುದ್ದೇಶದಿಂದ ದಾಖಲಿಸಲಾಗಿದೆ ಎಂದು ಬಿಜೆಪಿಯವರು ಹೇಳಲಿ. ತಜ್ಞರ ಅಭಿಪ್ರಾಯ ಪಡೆದುಕೊಂಡೇ ದೂರು ನೀಡಲಾಗಿದೆ" ಎಂದು ಹೇಳಿದರು.
ಜೂನ್ 17 ರಂದು ಅಮಿತ್ ಮಾಳವೀಯ ಅವರು ತಮ್ಮ ಅಧಿಕೃತ ಖಾತೆಯಿಂದ ಅನಿಮೇಟೆಡ್ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಆ ವೀಡಿಯೊದಲ್ಲಿ ಕಾಂಗ್ರೆಸ್ ಪಕ್ಷವು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಮತ್ತು ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದಾಗಲೆಲ್ಲಾ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶವನ್ನು ಒಡೆಯುತ್ತಿದ್ದಾರೆ ಎನ್ನುವಂತೆ ವಿಡಿಯೋದಲ್ಲಿ ಬಿಂಬಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.
ಸುಳ್ಳಿನ ಕಾರ್ಖಾನೆ ಮುಚ್ಚುತ್ತೇವೆ
ಬಿಜೆಪಿ ಪಕ್ಷ ನಡೆಸುತ್ತಿರುವ ಸುಳ್ಳಿನ ಕಾರ್ಖಾನೆಯನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ. ಬಿಜೆಪಿ ಕಾರ್ಯಕರ್ತರೇ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ. ಅದನ್ನು ಈಗ ಆಗಲು ಬಿಡುವುದಿಲ್ಲ. ಫ್ಯಾಕ್ಟ್ ಚೆಕ್ ಘಟಕವನ್ನು ಬಲಪಡಿಸಲಾಗುವುದು. ಈಗಾಗಲೇ ಸಿಎಂ ಜತೆ ಮಾತನಾಡಿದ್ದೇನೆ. ಕೋಮುವಾದ, ಶಾಂತಿ ಕದಡುವ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿಯವರು ಯಾವಾಗಲೂ ಕೆಟ್ಟ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ ಮತ್ತು ದ್ವೇಷವನ್ನು ಬಿತ್ತುತ್ತಾರೆ ಮತ್ತು ಭಯವನ್ನು ಸೃಷ್ಟಿಸುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜೆಪಿ ನಡ್ಡಾ, ಅಮಿತ್ ಮಾಳವೀಯ ಮತ್ತು ಸೂದ್ ಅವರಂತಹವರು ತಮ್ಮ ಖಾತೆಗಳಿಂದ ಸುಳ್ಳುಗಳನ್ನು ಹರಡುವಾಗ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.












Click it and Unblock the Notifications