ಹೊಸ ಕಾರು, ಬೈಕ್ ಮಾರಾಟ; ಅಕ್ಟೋಬರ್‌ನಲ್ಲಿ ಬೆಂಗಳೂರಲ್ಲಿ ದಾಖಲೆ
ಬೆಂಗಳೂರು, ನವೆಂಬರ್ 18: ಉದ್ಯಾನ ನಗರಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಜನರನ್ನು ಉತ್ತೇಜಿಸುವ ಪ್ರಯತ್ನಗಳು ಸಹ ನಡೆಯುತ್ತಲೇ ಇವೆ. ಅಕ್ಟೋಬರ್‌ನಲ್ಲಿ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಖಾಸಗಿ ವಾಹನಗಳ ಮಾರಾಟದಲ್ಲಿ ದಾಖಲೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹೆಚ್ಚು ವಾಹನಗಳು ಮಾರಾಟವಾಗಿವೆ ಎಂದು ಅಂಕಿ-ಅಂಶಗಳು ಹೇಳಿವೆ.
ಸಾರಿಗೆ ಇಲಾಖೆಯ ಮಾಹಿತಿಯಂತೆ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ 66,297 ಹೊಸ ವಾಹನಗಳು ನೋಂದಣಿಯಾಗಿವೆ. ದ್ವಿ ಚಕ್ರವಾಹನಗಳ ಮಾರಾಟದಲ್ಲಿ ಶೇ 25ರಷ್ಟು ಏರಿಕೆ ಕಂಡುಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.

ಹೊಸ ವಾಹನದ ಅಂಕಿ-ಸಂಖ್ಯೆಗಳು: ಸಾರಿಗೆ ಇಲಾಖೆ ಮಾಹಿತಿಯಂತೆ 2023ರ ಅಕ್ಟೋಬರ್‌ನಲ್ಲಿ ಬೆಂಗಳೂರು ನಗರದಲ್ಲಿ 53,512 ವಾಹನಗಳು ನೋಂದಣಿಯಾಗಿದ್ದವು. ಆದರೆ 2024ರ ಅಕ್ಟೋಬರ್‌ನಲ್ಲಿ ಒಟ್ಟು 66,297 ವಾಹನಗಳ ನೋಂದಣಿಯಾಗಿದೆ. ಇವುಗಳಲ್ಲಿ 50,512 ಬೈಕ್‌ಗಳು ಮತ್ತು 15,785 ಕಾರುಗಳು.
ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಹೊಸ ವಾಹನಗಳ ನೋಂದಣಿ ಅಧಿಕವಾಗಿದೆ. ಹೊಸ ಬೈಕ್‌ಗಳ ಮಾರಾಟ ಶೇ 23ರಷ್ಟು ಮತ್ತು ಕಾರುಗಳ ಮಾರಾಟ ಶೇ 17ರಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಇದೆ.
ಸಾರ್ವಜನಿಕ ಸಾರಿಗೆಯ ದರಗಳು, ವೇಳಾಪಟ್ಟಿಯ ಕಾರಣ ಜನರು ಹೆಚ್ಚು ಹೆಚ್ಚು ಖಾಸಗಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ. ತಜ್ಞರ ಪ್ರಕಾರ ಮುಂಬೈ, ಚೆನ್ನೈಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳ ಪ್ರಯಾಣ ದರ ಹೆಚ್ಚಿದೆ. ಬಿಎಂಆರ್‌ಸಿಎಲ್, ಬಿಎಂಟಿಸಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ ಎಂದು ಹೇಳಿದ್ದಾರೆ.
ಅಕ್ಟೋಬರ್‌ನ ಕಾರು ಮತ್ತು ಬೈಕ್ ಮಾರಾಟದ ಅಂಕಿ ಅಂಶಗಳ ನಂತರ ಬೆಂಗಳೂರು ನಗರದಲ್ಲಿರುವ ಒಟ್ಟು ವಾಹನಗಳ ಸಂಖ್ಯೆ 1.05 ಕೋಟಿ. ನಗರದ ರಸ್ತೆಗಳಲ್ಲಿರುವ ವಾಹನಗಳಲ್ಲಿ ಬೈಕ್ ಮತ್ತು ಕಾರುಗಳ ಪ್ರಮಾಣವೇ ಶೇ 87.6ರಷ್ಟಿದೆ. ಈ ವರ್ಷ ಜನವರಿ-ಅಕ್ಟೋಬರ್ ತನಕ ಬೆಂಗಳೂರು ನಗರದಲ್ಲಿ ನೋಂದಣಿಯಾದ ಕಾರುಗಳ ಸಂಖ್ಯೆ 1.25 ಲಕ್ಷ.
ಸಾರಿಗೆ ಕ್ಷೇತ್ರದ ತಜ್ಞರ ಪ್ರಕಾರ ನಗರದಲ್ಲಿ ಕಾರು, ಬೈಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸಾರ್ವಜನಿಕ ಸಾರಿಗೆ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಮೆಟ್ರೋ ನಗರದ ಭವಿಷ್ಯದ ಸಾರಿಗೆ ವ್ಯವಸ್ಥೆ ಎಂದು ಕೊಂಡರೂ ಸಹ ಅದು ಕೆಲವೇ ಕಿ. ಮೀ. ವ್ಯಾಪ್ತಿಯನ್ನು ಹೊಂದಿದೆ. ನಮ್ಮ ಮೆಟ್ರೋ ಮಾರ್ಗದ ವಿಸ್ತರಣೆ, ಹೊಸ ಮಾರ್ಗಗಳ ನಿರ್ಮಾಣ ಬಹಳ ವಿಳಂಬವಾಗುತ್ತಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯು ಇನ್ನೂ ಸಹ ಪ್ರಾರಂಭಿಕ ಹಂತದಲ್ಲಿದೆ. ಆದ್ದರಿಂದ ನಗರದಲ್ಲಿ ಖಾಸಗಿ ವಾಹನಗಳ ಮೊರೆ ಹೋಗುವುದು ಜನರಿಗೆ ಅನಿವಾರ್ಯವಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸದೇ ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ 2025ರಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಈ ಮಾರ್ಗದಿಂದ ಸುಮಾರು 3 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications