ಬೆಂಗಳೂರಿನಲ್ಲಿ ವಾಸವಿದ್ದ ಪಾಕ್ ಯುವತಿಯ ಗಡಿಪಾರು
ಇಕ್ರಾ ಎಂಬಾಕೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್‌ನನ್ನು ಜೊತೆ ಸಂಪರ್ಕ ಬೆಳೆಸಿಕೊಂಡು ತಾನು ಆತನನ್ನು ಮದುವೆಯಾಗುವುದಾಗಿ ಭಾರತ-ನೇಪಾಳ ಗಡಿಯ ಮೂಲಕ ನವೆಂಬರ್ 2022ರಲ್ಲಿ ಬೆಂಗಳೂರಿಗೆ ಬಂದಿದ್ದಳು
ಬೆಂಗಳೂರು, ಫೆಬ್ರವರಿ 21: ಉತ್ತರ ಪ್ರದೇಶದ ವ್ಯಕ್ತಿಯನ್ನು ಮದುವೆಯಾಗಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ 19 ವರ್ಷದ ಪಾಕಿಸ್ತಾನಿ ಯುವತಿಯನ್ನು ಅವರ ಸ್ವದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಕ್ರಾ ಜೀವನಿ ಎಂಬಾಕೆ ಡೇಟಿಂಗ್ ಅಪ್ಲಿಕೇಶನ್ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್‌ನನ್ನು ಜೊತೆ ಸಂಪರ್ಕ ಬೆಳೆಸಿಕೊಂಡು ತಾನು ಆತನನ್ನು ಮದುವೆಯಾಗುವುದಾಗಿ ಭಾರತ-ನೇಪಾಳ ಗಡಿಯ ಮೂಲಕ ನವೆಂಬರ್ 2022ರಲ್ಲಿ ಬೆಂಗಳೂರಿಗೆ ಬಂದಿದ್ದಳು ಎಂದು ಹೇಳಲಾಗಿತ್ತು.
ಆಗ್ನೇಯ ಬೆಂಗಳೂರಿನ ಜುನ್ನಸಂದ್ರದ ಅಯ್ಯಪ್ಪ ದೇವಸ್ಥಾನದ ಬಳಿ ದಂಪತಿಗಳು ಬಾಡಿಗೆಗೆ ಮನೆಯನ್ನು ತೆಗೆದುಕೊಂಡಿದ್ದರು. ಮುಲಾಯಂ ಸಿಂಗ್ ಅವರು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದನು. ಇಕ್ರಾ ಪಾಕಿಸ್ತಾನದಲ್ಲಿರುವ ತನ್ನ ಕುಟುಂಬವನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ ನಂತರ ಗುಪ್ತಚರ ಬ್ಯೂರೋ ಅವಳ ಬೆನ್ನು ಬಿದ್ದಿತು.

ಬಳಿಕ ಅವರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆಕೆಯ ರಾಷ್ಟ್ರೀಯತೆಯನ್ನು ಖಚಿತಪಡಿಸಿದ ನಂತರ ಸ್ಥಳೀಯ ಬೆಳ್ಳಂದೂರು ಪೊಲೀಸರು ಈ ವರ್ಷದ ಜನವರಿಯಲ್ಲಿ ಅವಳನ್ನು ಬಂಧಿಸಿದ್ದರು. ಯುವತಿ ಜೊತೆ ಮುಲಾಯಂ ಸಿಂಗ್ ಅವರನ್ನೂ ಬಂಧಿಸಲಾಗಿತ್ತು. ಅಲ್ಲದೆ ಮನೆ ಬಾಡಿಗೆ ನೀಡಿದ್ದ ಗೋವಿಂದ್ ರೆಡ್ಡಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಪೊಲೀಸರು ತರುವಾಯ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಮಾಹಿತಿ ನೀಡಿದರು. ಇಕ್ರಾಳನ್ನು ಮಹಿಳೆಯರಿಗೆ ಮೀಸಲಾದ ಸರ್ಕಾರದ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಯಿತು. ಮುಲಾಯಂ ಸಿಂಗ್ ಯಾದವ್ ತನ್ನ ಹೆಸರನ್ನು ರಾಮ ಯಾದವ್ ಎಂದು ಬದಲಾಯಿಸಿಕೊಳ್ಳುವ ಮೂಲಕ ಇಕ್ರಾಗೆ ಆಧಾರ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.
ನಂತರ ಆಕೆ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ಭಾನುವಾರ ವಾಘಾ ಗಡಿಯಲ್ಲಿ ಇಕ್ರಾಳನ್ನು ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿತ್ತು. ಬೆಂಗಳೂರು ಪೊಲೀಸರ ವಿಶೇಷ ತಂಡ ಆಕೆಯನ್ನು ಗಡಿ ಚೆಕ್‌ಪೋಸ್ಟ್‌ಗೆ ಕರೆದೊಯ್ದಿತ್ತು ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ಸೇನೆಯ ಅಧಿಕಾರಿಗಳು ಆಕೆಯ ದಾಖಲೆಗಳನ್ನು ಪರಿಶೀಲಿಸಿದರು. ನಂತರ ಆಕೆಯನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications