EV: ಲೀಥಿಯಂ ಸೆಲ್ ಉತ್ಪಾದನೆ ಹೆಚ್ಚಳಕ್ಕೆ ಎಕ್ಸೈಡ್ ಸಜ್ಜು, ಸರ್ಕಾರಕ್ಕೆ ಮನವಿ
ಬೆಂಗಳೂರು, ಆಗಸ್ಟ್ 21: ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ತನ್ನ ಲಿಥಿಯಂ ಬ್ಯಾಟರಿ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸಲು ತೀರ್ಮಾನಿಸಿದೆ. ಈ ಸಂಬಂಧ ಹೆಚ್ಚುವರಿಯಾಗಿ 40 ಎಕರೆ ಜಾಗವನ್ನು ನೀಡುವಂತೆ ಎಕ್ಸೈಡ್ ಎನರ್ಜಿ ಕಂಪನಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ. ಮಂದಾರ್ ವಿ.ದಿಯೋ ಅವರ ನೇತೃತ್ವದಲ್ಲಿ ಕಂಪನಿ ಪ್ರತಿನಿಧಿಗಳು ಸೋಮವಾರ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ. ಪಾಟೀಲ್ ಅವರನ್ನು ಭೇಟಿ ಮಾಡಿತು. ಪ್ರಸ್ತಾವನೆ ಮತ್ತು ತಮ್ಮ ಮನವಿ ಕುರಿತು ಚರ್ಚಿಸಿದರು.

ಕಂಪನಿಯು ಈಗಾಗಲೇ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ 6,000 ಗಿಗಾವಾಟ್ ಸಾಮರ್ಥ್ಯದ ಲೀಥಿಯಂ ಸೆಲ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಅದರ ನಿರ್ಮಾಣ ಕಾರ್ಯ ಕೈಗೊಂಡಿದೆ. ಅದು 2024ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ.
ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಯೋಜನೆ
ಈ ಮಧ್ಯೆ ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಇನ್ನೂ 6,000 ಗಿಗಾವಾಟ್ ಗಳಷ್ಟು ಹೆಚ್ಚಿಸಬೇಕೆಂಬ ಯೋಜನೆಯನ್ನು ಹಾಕಿಕೊಂಡಿದೆ. ಈ ಎರಡೂ ಘಟಕಗಳಿಗೆ ಒಟ್ಟಾರೆ ಮಾಡುವ ಹೂಡಿಕೆ ರೂ. 6,000 ಕೋಟಿಗಳಷ್ಟು ಆಗುತ್ತದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದರು.

ಕಂಪನಿಯ ಈ ಪ್ರಸ್ತಾವವನ್ನು ಎಂಬಿ ಪಾಟೀಲ ಅವರು ಸ್ವಾಗತಿಸಿದ್ದಾರೆ. ಎಲೆಕ್ಟ್ರಿಕ್ ವಾಹನೋದ್ಯಮವನ್ನು ರಾಜ್ಯದಲ್ಲಿ ಸದೃಢವಾಗಿ ಬೆಳೆಸಬೇಕೆಂಬ ಸರ್ಕಾರದ ಉದ್ದೇಶಕ್ಕೆ ಇದು ಪೂರಕವಾಗಿದೆ. ಕಂಪನಿಯ ಪ್ರಸ್ತಾವವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಮುಂಬರುವ 2024ರಲ್ಲಿ ಪ್ರಸ್ತಾವಿಸಲಾಗಿರುವ ಎರಡನೇ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂಬುದು ಕಂಪನಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಸಮಾಲೋಚಣೆ ವೇಳೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಇದ್ದರು. ಎಕ್ಸೈಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವೀರಭದ್ರ ಮತ್ತಿತರ ಅಧಿಕಾರಿಗಳು ಇದ್ದರು.












Click it and Unblock the Notifications