ಫಿಡಿಲಿಟಸ್ ಗ್ಯಾಲರಿಯಲ್ಲಿ 'ಮಿಸ್ಟಿಕ್ ಜರ್ನಿ' ಚಿತ್ರ ಪ್ರದರ್ಶನ ಆರಂಭ
ಬೆಂಗಳೂರು, ಸೆಪ್ಟೆಂಬರ್ 03: ನಗರದ ಬನಶಂಕರಿಯ ಫಿಡೆಲಿಟಸ್ ಗ್ಯಾಲರಿಯಲ್ಲಿ ಖ್ಯಾತ ಚಿತ್ರ ಕಲಾವಿದ ರವಿ ಕೋಟೆಗದ್ದೆಯವರ ವಿಭಿನ್ನ ಕಲಾ ಕೃತಿಗಳ ಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು ಚಿತ್ರ ಪ್ರದರ್ಶನವನ್ನು ಫ್ರೀಡಂ ಆಪ್ ಸಂಸ್ಥಾಪಕರಾದ ಸಿ.ಎಸ್ ಸುಧೀರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸುಧೀರ್ "ಪ್ರತಿಯೊಬ್ಬರಿಗೂ ಕೂಡಾ ಬೇರೆ ಬೇರೆ ರೀತಿಯ ಕಲ್ಪನೆಗಳು ಇರುತ್ತವೆ. ಆದರೆ ಕಲ್ಪನೆಗಳಿಗೂ ಮೀರಿದ ಯೋಚನೆಗಳು ಬರುವುದು ರವಿ ಕೋಟೆಗದ್ದೆಯವರಿಂದ ಮಾತ್ರ. ಕಲಾವಿದ ತನ್ನ ಕೃತಿಗಳ ಅಂದಕ್ಕಿಂತ ತನ್ನ ಕಲ್ಪನೆಗಳನ್ನು ಜಗತ್ತಿಗೆ ಸಾರುವ ಪರಿಯೇ ಬೇರೆ ಇರುತ್ತದೆ. ಹಾಗಾಗಿಯೇ ಮೆದುಳಿನ ಬೆಳವಣಿಗೆ ಹಾಗೂ ಏಕಾಗ್ರತೆಗೆ ಇಂತಹ ಕಲಾಕೃತಿಗಳು ಸಹಾಯಕವಾಗುತ್ತವೆ. ಇದರಿಂದಲೇ ಈತರದ ಕಲಾ ಕೃತಿಗಳನ್ನು ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಪ್ರದರ್ಶಿಸಿ ಅವುಗಳ ಬಗ್ಗೆ ಯೋಚನೆ ಮಾಡಿಸಿ ಮಕ್ಕಳ ಯೋಚನಾ ಶಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಮಾತ್ರವಲ್ಲದೇ ಇಂತಹ ಅದ್ಭುತ ಕಲಾವಿದರನ್ನು ಮತ್ತು ಅವರ ಕಲೆಗಳನ್ನು ಸಂಘ ಸಂಸ್ಥೆಗಳು ಮತ್ತು ಸರಕಾರಗಳು ಹೆಚ್ಚು ಉತ್ತೇಜನ ನೀಡಿ ಬೆಳೆಸಬೇಕಿದೆ " ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಮಂತ್ & ಅಸೋಸಿಯೇಟ್ಸ್ ಇದರ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಅಶೋಕ್, ಗುಲಾಬ್ ಪ್ರೊಡಕ್ಷನ್ಸ್ ನಿರ್ಮಾಪಕ ಕೆ.ಆರ್ ಕೃಷ್ಣ, ಹಿರಿಯ ಚಿತ್ರ ಕಲಾವಿದರೂ ಚಿತ್ರ ವಿಮರ್ಶಕರೂ ಆಗಿರುವ ಚಿ.ಸು ಕೃಷ್ಣ ಸೆಟ್ಟಿ ಫಿಡಿಲಿಟಸ್ ಸಂಸ್ಥೆಯ ಸಂಸ್ಥಾಪಕರಾದ ಅಚ್ಚುತ್ ಗೌಡ, ಹಾಗೂ ಇತರರು ಭಾಗವಹಿಸಿದ್ದರು.
ಇನ್ನು ಇಂದು ಆರಂಭಗೊಂಡ ಚಿತ್ರ ಪ್ರದರ್ಶನ ಸೆಪ್ಟೆಂಬರ್ 12ರ ತನಕ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 7ರ ತನಕ ನಡೆಯಲಿದೆ. ಕಲಾಕೃತಿಗಳನ್ನು ಕೊಂಡುಕೊಳ್ಳಲು ಇಚ್ಛಿಸುವವರು ಹಾಗೂ ಚಿತ್ರ ಪ್ರೇಮಿಗಳು ಪ್ರದರ್ಶನ ವೀಕ್ಷಣೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಫಿಡಿಲಿಟಸ್ ಗ್ಯಾಲರಿಗೆ ಭೇಟಿ ನೀಡಬಹುದು.












Click it and Unblock the Notifications