ಮಾಜಿ ಶಾಸಕರ ಪುತ್ರಿ ಚಿತ್ರ ದುರ್ಬಳಕೆ, ಸ್ನೇಹಿತೆ ಬಂಧನ
ಬೆಂಗಳೂರು, ಜು. 21 : ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಬೇಳೂರು ಗೋಪಾಲಕೃಷ್ಣ ಅವರ ಪುತ್ರಿ ಮೇಘಾ ವಂದನಾ ಅವರ ಭಾವಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ನಕಲಿ ಖಾತೆ ತೆರೆದ ಆರೋಪದ ಮೇಲೆ ಪ್ರತಿಮಾ ಎಂಬುವರನ್ನು ಆರ್.ಟಿ.ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇಘಾ ವಂದನಾ ಜು.17ರಂದು ಆರ್.ಟಿ.ನಗರ ಪೊಲೀಸರಿಗೆ ದೂರು ನೀಡಿದ್ದು, ನನ್ನ ಸ್ನೇಹಿತೆಯಾದ ಪ್ರತಿಮಾ ನನ್ನ ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಫೇಸ್ ಬುಕ್, ವಾಟ್ಸ್ ಆ್ಯಪ್ ಮತ್ತು ವಿ-ಚಾಟ್ ನಲ್ಲಿ ನಕಲಿ ಖಾತೆ ತೆರೆದಿದ್ದಾಳೆ. ಆ ಖಾತೆಗಳ ಮೂಲಕ ಸ್ನೇಹಿತರಿಗೆ ನನ್ನ ಹೆಸರಿನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾಳೆ ಎಂದು ದೂರಿದ್ದಳು.

ಈ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಪ್ರತಿಮಾಳನ್ನು ಚೆನ್ನೈನಲ್ಲಿ ಭಾನುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ಸೋಮವಾರ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತದೆ ಎಂದು ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸ್ನೇಹಿತರು : ಪ್ರತಿಮಾ ಮತ್ತು ಮೇಘಾ ವಂದನಾ ಹಿಂದೆ ತಮಿಳುನಾಡಿನ ಪ್ರೌಢ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಸದ್ಯ ಚೆನ್ನೈನಲ್ಲಿರುವ ಪ್ರತಿಮಾ, ಮೇಘಾ ಅವರ ಅಸಲಿ ಫೇಸ್ ಬುಕ್ ಖಾತೆಯಿಂದ ಭಾವಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ನಕಲಿ ಖಾತೆಗಳನ್ನು ತೆರೆದಿದ್ದಾರೆ.
ವಾಟ್ಸ್ ಆ್ಯಪ್ ಮತ್ತು ವಿ-ಚಾಟ್ ಮೂಲಕ ಮೇಘಾ ವಂದನಾ ಹೆಸರಿನಲ್ಲಿ ಅವರ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕೆಲವು ದಿನಗಳ ಹಿಂದೆ ಮೇಘಾ ಅವರಿಗೆ ಕರೆ ಮಾಡಿದ್ದ ಸ್ನೇಹಿತರು, ಅಶ್ಲೀಲ ಸಂದೇಶಗಳು ಬರುತ್ತಿರುವ ಸಂಗತಿಯನ್ನು ತಿಳಿಸಿದ್ದರು.
ನಂತರ ಮೇಘಾ ವಂದನಾ ಅವರು ಸಂದೇಶಗಳು ಬರುವ ಮೊಬೈಲ್ ಸಂಖ್ಯೆಯನ್ನು ಪರಿಶೀಲನೆ ನಡೆಸಿದಾಗ, ಪ್ರತಿಮಾ ಮಾಡಿದ ಕೃತ್ಯ ಬೆಳಕಿಗೆ ಬಂದಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿಮಾ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ದುರ್ಬಳಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications