Egg Price: ತರಕಾರಿ ಬಳಿಕ ಈಗ ಮೊಟ್ಟೆ ಬೆಲೆಯಲ್ಲೂ ಏರಿಕೆ
ಅನಿಯಮಿತ ಮಳೆ ಮತ್ತು ಕೋಳಿ ಆಹಾರದ ಬೆಲೆ ಏರಿಕೆಯು ಕೋಳಿ ಸಾಕಣೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ನಗರದಲ್ಲಿ ಮೊಟ್ಟೆಯ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಕಾಡುತ್ತಿದೆ.
ಈ ವಾರದ ಆರಂಭದಲ್ಲಿ ನಗರದಲ್ಲಿ ಪ್ರತಿ ಮೊಟ್ಟೆಯ ಸಗಟು ಬೆಲೆ 5.65 ರೂ.ಗಳಷ್ಟಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 6.5 ರೂಪಾಯಿ ಇತ್ತು ಮತ್ತು ಸೂಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಮಾರುಕಟ್ಟೆಗಳಲ್ಲಿ 12 ಅಥವಾ 30 ಮೊಟ್ಟೆಗಳ ಪೆಟ್ಟಿಗೆಗಳಲ್ಲಿ ಪ್ಯಾಕೇಜ್ ಮಾಡಿದ ಮೊಟ್ಟೆಗಳಿಗೆ 6 ರಿಂದ 8 ರೂಪಾಯಿ ದರ ಇದೆ.

ಕಳೆದ ವಾರದಿಂದ ಬೆಲೆ ಸ್ಥಿರವಾಗಿದ್ದರೂ, ನಗರದಲ್ಲಿ ಪ್ರತಿ ಯೂನಿಟ್ ಸಗಟು ದರವು ಸೆಪ್ಟೆಂಬರ್ ತಿಂಗಳಿನ ಇದೇ ದಿನ 4.6 ರೂಪಾಯಿ ಇದ್ದರೆ ಅಕ್ಟೋಬರ್ ತಿಂಗಳಿನಲ್ಲಿ 5.35 ರೂಪಾಯಿ ಆಗಿತ್ತು.
ಆನ್‌ಲೈನ್, ಸೂಪರ್ ಮಾರ್ಕೆಟ್‌ನಲ್ಲಿ ಮೊಟ್ಟೆ ದರ
ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು 12 ಮತ್ತು 30 ಮೊಟ್ಟೆಗಳ ಪೆಟ್ಟಿಗೆಗಳನ್ನು ಪ್ರತಿ ಯೂನಿಟ್‌ಗೆ ರೂ 6.5 ರಿಂದ ರೂ 8 ರವರೆಗೆ ಮಾರಾಟ ಮಾಡುತ್ತಿವೆ. ಝೆಪ್ಟೋದಲ್ಲಿ 30 ಮೊಟ್ಟೆಗಳ ಬಾಕ್ಸ್‌ಗೆ 235 ರೂಪಾಯಿ ಬೆಲೆ ಇದೆ. ಇದು ಪ್ರತಿ ಮೊಟ್ಟೆಗೆ ಸರಿಸುಮಾರು 7 ರೂ. ಆಗುತ್ತದೆ. ಅಮೆಜಾನ್ 30 ಮೊಟ್ಟೆಗಳ ಪೆಟ್ಟಿಗೆಯನ್ನು ರೂ 195 ಕ್ಕೆ ಮಾರಾಟ ಮಾಡುತ್ತಿದೆ, ಬಿಗ್ ಬಾಸ್ಕೆಟ್‌ನಲ್ಲಿನ ಮೊಟ್ಟೆಗಳು ಪ್ರತಿ ಯೂನಿಟ್‌ಗೆ ರೂ 8 ರಷ್ಟಿದೆ.
ಸಾಕಾಣಿಕೆ ವೆಚ್ಚ ಹೆಚ್ಚಳ
ಕೋಳಿ ಆಹಾರದ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು ಕೋಳಿ ಸಾಕಾಣಿಕೆದಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಜೋಳ, ನುಚ್ಚಕ್ಕಿ ಮತ್ತು ಸೂರ್ಯಕಾಂತಿ ಇಂಡಿಯ ಬೆಲೆ ಹೆಚ್ಚಳವಾಗಿದ್ದು ವೆಚ್ಚ ಸರಿದೂಗಿಸಲು ಸಾಕಾಣಿಕೆದಾರರು ಪರದಾಡುವಂತಾಗಿದೆ.
ನ್ಯಾಷನಲ್ ಎಗ್ ಕೋ-ಆರ್ಡಿನೇಷನ್ ಕಮಿಟಿ (ಎನ್‌ಇಸಿಸಿ) ಯ ಮಾಹಿತಿಯ ಪ್ರಕಾರ, ಸೂರ್ಯಕಾಂತಿ ಇಂಡಿ ಬೆಲೆ ಅಕ್ಟೋಬರ್ 2022 ರಲ್ಲಿ ಟನ್‌ಗೆ ರೂ 26,000 ಇದ್ದರೆ ಈ ವರ್ಷದ ನವೆಂಬರ್‌ನಲ್ಲಿ ರೂ 33,500 ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ಪ್ರತಿ ಟನ್ ಮೆಕ್ಕೆಜೋಳದ ಬೆಲೆ ಶೇ.9.3ರಷ್ಟು ಏರಿಕೆಯಾಗಿದ್ದು, ಕಳೆದ ಅಕ್ಟೋಬರ್ ನಲ್ಲಿ 21,500 ರೂ.ಗಳಿಂದ ಈ ವರ್ಷ 23,500 ರೂ.ಗೆ ಹೆಚ್ಚಾಗಿದೆ ಎಂದು ಡಿಹೆಚ್ ವರದಿಯಲ್ಲಿ ಹೇಳಿದೆ.
ನುಚ್ಚಕ್ಕಿಯನ್ನು ಖರೀದಿಸುವುದು ಕಷ್ಟ ಎಂದು ಸಾಕಾಣಿಕೆದಾರರು ಹೇಳಿದ್ದಾರೆ. ಪ್ರತಿ ಟನ್ ನುಚ್ಚಕ್ಕಿ 22,500 ರೂ.ಗೆ ಏರಿತು, ಕಳೆದ ವರ್ಷಕ್ಕೆ ಹೋಲಿಸಿದರೆ 18% ಹೆಚ್ಚಾಗಿದೆ.
ಅನಿಯಮಿತ ಮಳೆ ಕೃಷಿ ವಲಯದ ಮೇಲೆ ಪರಿಣಾಮ ಬೀರಿದ್ದು ಪ್ರತಿಯಾಗಿ ಕೋಳಿಯ ಮೇವಿನ ಬೆಲೆ ಕೂಡ ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಈಗಲೇ ಕೋಳಿ ಸಾಕಾಣಿಕೆದಾರರನ್ನು ಚಿಂತೆಗೆ ದೂಡಿದೆ.
ತಮಿಳುನಾಡಿನಿಂದ ರಾಜ್ಯಕ್ಕೆ ಪ್ರತಿದಿನ ಸುಮಾರು 50 ಲಕ್ಷ ಮೊಟ್ಟೆಗಳು ಆಮದಾಗುತ್ತದೆ. ಆದರೆ ರಾಜ್ಯದ ಕೋಳಿ ಸಾಕಣೆದಾರರನ್ನು ಬೆಂಬಲಿಸಲು ಪರಿಣಾಮಕಾರಿ ಕ್ರಮಗಳಿಂದ ಈ ಆಮದನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.












Click it and Unblock the Notifications