ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ: ಸಿಎಜಿ ವರದಿ ನೀಡಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು,ಸೆ.15. ಬೆಂಗಳೂರು ನಗರದಲ್ಲಿ ಪ್ರವಾಹಕ್ಕೆ ಕಾರಣವಾಗುವ ರಾಜಕಾಲುವೆ ಒತ್ತುವರಿಗೆ ಸಂಬಂಧ ಭಾರತೀಯ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿನ ಉಲ್ಲೇಖದ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಇದರಿಂದಾಗಿ ನ್ಯಾಯಾಲಯ ಸಿಎಜಿ ವರದಿಯನ್ನು ನೋಡಿದ ಬಳಿಕ ಪಾಲಿಕೆಗೆ ಸೂಕ್ತ ನಿರ್ದೇಶನಗಳನ್ನು ನೀಡುವ ಸಾಧ್ಯತೆ ಇದೆ.
ಬೆಂಗಳೂರು ನಗರದ ರಸ್ತೆಗಳ ಸ್ಥಿತಿಗತಿ ಸಂಬಂಧ ಕೋರಮಂಗಲದ ವಿಜಯ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಪಾಲಿಕೆ ವಾದ ಆಲಿಸಿದ ಬಳಿಕ ನ್ಯಾಯಪೀಠ, ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತವಾಗಿದೆಯೇ? ಒತ್ತುವರಿಗೆ ಸಂಬಂಧಿದಂತೆ ಬೇರೆ ಯಾವುದಾದರೂ ಪ್ರಾಧಿಕಾರವು ಪರ್ಯಾಯವಾಗಿ ತನಿಖೆ ನಡೆಸುತ್ತಿದೆಯೇ? ಎಂಬುದು ನ್ಯಾಯಾಲಯ ತಿಳಿಯಬೇಕಿದೆ. ಗುತ್ತಿಗೆದಾರರು ಸಾರ್ವಜನಿಕ ಸೇವೆ ಮಾಡುತ್ತಿಲ್ಲ. ಹಣ ಮಾಡುತ್ತಿದ್ದಾರೆ. ಅವರನ್ನು ಬಿಬಿಎಂಪಿ ನಿಯಂತ್ರಿಸಬೇಕು ಎಂದು ಹೇಳಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತು.

ಒತ್ತುವರಿ ತೆರವು ಕಾರ್ಯಪ್ರಗತಿಯಲ್ಲಿ:
ವಿಚಾರಣೆ ವೇಳೆ ಹೈಕೋರ್ಟ್ ನಿರ್ದೇಶದನ್ವಯ ದೂರು ಪರಿಹಾರ ಕೇಂದ್ರಕ್ಕೆ ಸಂಬಂಧಿಸಿದಂತೆ ಈವರೆಗೂ ಆಗಿರುವ ಬೆಳವಣಿಗೆಗಳ ವಿವರಿಸಿದ ಬಿಬಿಎಂಪಿ ವಕೀಲರು, ಮಳೆ ನೀರು ಹರಿದು ಹೋಗಲು ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ರಾಜಕಾಲುವೆ ಒತ್ತುವರಿ ಪತ್ತೆ ಮತ್ತು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅದಕ್ಕೆ ನ್ಯಾಯಪೀಠ, ರಾಜಕಾಲುವೆಯ ಎಷ್ಟು ಒತ್ತುವರಿಯನ್ನು ಪತ್ತೆ ಮಾಡಲಾಗಿದೆ ಹಾಗೂ ಎಷ್ಟು ತೆರವುಗೊಳಿಸಲಾಗಿದೆ? ಪ್ರಶ್ನಿಸಿತಲ್ಲದೆ, ಆ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡದಿದ್ದರೆ ಅದರ ಮೇಲೆ ನ್ಯಾಯಾಲಯ ನಿಗಾ ವಹಿಸುವುದು ಹೇಗೆ ಎಂದು ಕೇಳಿತು.
ಬಿಬಿಎಂಪಿ ಪರ ವಕೀಲರು, ಪ್ರತಿ ನಿತ್ಯ ಒತ್ತುವರಿ ಪತ್ತೆ ಹಾಗೂ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೂ ಎಷ್ಟು ಒತ್ತುವರಿ ಮಾಡಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ದುರದೃಷ್ಟಕರ: ನಗರದಲ್ಲಿ ಬಿದ್ದಿರುವ ರಸ್ತೆ ಗುಂಡಿಗೆ ಇಟ್ಟಿಗೆ ಚೂರು, ನುಚ್ಚುಗಲ್ಲು ಮತ್ತು ಸಿಮೆಂಟ್ ಬ್ಲಾಕ್ ಚೂರುಗಳಿಂದ ಮುಚ್ಚಲಾಗುತ್ತಿದೆ. ಗುಂಡಿಯನ್ನು ಮುಚ್ಚಲು ಯಂತ್ರವನ್ನು ಬಳಸುತ್ತಿರುವ ದೇಶದ ಮೊದಲ ಪಾಲಿಕೆ ಎಂದು ಹೇಳುತ್ತಿರುವ ಬಿಬಿಎಂಪಿ, ಈ ಮಾದರಿಯಲ್ಲಿ ರಸ್ತೆಗುಂಡಿ ಮುಚ್ಚುತ್ತಿರುವುದು ದುರದೃಷ್ಟಕರ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
ಬಿಡಿಎ ಆಯುಕ್ತರ ನೇಮಕ ಪ್ರಶ್ನಿಸಿದ್ದ ಪಿಐಎಲ್ ವಿಲೇ:
ಈ ಮಧ್ಯೆ, ಬಿಡಿಎ ಆಯುಕ್ತರನ್ನಾಗಿ ಎಂ.ಬಿ.ರಾಜೇಗೌಡ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
ಬಿಡಿಎ ಆಯುಕ್ತರನ್ನಾಗಿ ಎಂ.ಬಿ. ರಾಜೇಶ್ ಗೌಡ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ವಕೀಲ ಜಿ.ಮೋಹನ್ ಕುಮಾರ್ ಸಲ್ಲಿಸಿರುವ ಅರ್ಜಿ ಹಂಗಾಮಿ ಸಿಜೆ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಸರ್ಕಾರಿ ವಕೀಲರು, ಈಗಾಗಲೇ ಆಯುಕ್ತರನ್ನು ವರ್ಗಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು, ಅದಕ್ಕೆ ಅರ್ಜಿದಾರರು, ಸರ್ಕಾರ ವರ್ಗಾವಣೆ ಮಾಡಿರಲಿಲ್ಲ. ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ವರ್ಗಾವಣೆ ಮಾಡಿದೆ ಎಂದರು. ಆದರೆ ಅರ್ಜಿಯಲ್ಲಿ ಮಾಡಿದ್ದ ಮನವಿ ಈಡೇರಿದೆ ಹಾಗಾಗಿ ಅರ್ಜಿ ಮುಂದುವರಿಸುವ ಅಗತ್ಯವಿಲ್ಲ ಎಂದು ಪಿಐಎಲ್ ಅನ್ನು ವಿಲೇವಾರಿ ಮಾಡಿತು.












Click it and Unblock the Notifications