Namma Metro Yellow Line: ಗಮನಿಸಿ ಹಳದಿ ಮಾರ್ಗದಲ್ಲಿ ವಿದ್ಯುದೀಕರಣ: ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ
ಬೆಂಗಳೂರು, ಮೇ 20: ಬೆಂಗಳೂರಿನಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿಯು ಚುರುಕುಗೊಂಡಿದೆ. ಚೀನಾದಿಂದ ಬೋಗಿಗಳು ಬಂದು ಪರಿಶೀಲನೆ ಮಧ್ಯೆ BMRCL ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಯಕ್ಕೆ ಕೈ ಹಾಕಿರುವ ಕಾರಣ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ಕೊಟ್ಟಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಳದಿ ಮಾರ್ಗದಲ್ಲಿ ಪ್ರೊಟೊಟೈಪ್ ಬೋಗಿಗಳ ರೈಲಿನ ಪರೀಕ್ಷೆ ನಡೆಸುವ ಜೊತೆಗೆ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಈ ಮಾರ್ಗದಲ್ಲಿನ ಹಳಿಗೆ ವಿದ್ಯುದ್ದೀಕರಣ ನಡೆಸುತ್ತಿದೆ. ಹೀಗಾಗಿ ಮಾರ್ಗದಲ್ಲಿನ ವಯಾಡಕ್ಟ್‌ಗಳಿಗೆ ಜನರು ಅನಗತ್ಯವಾಗಿ ಯಾರೂ ಪ್ರವೇಶಿಸಬಾರದು ಎಂದು ತಿಳಿಸಿದೆ.

ಏಕೆಂದರೆ 750 ವೋಲ್ಟ್ ವಿದ್ಯುತ್ ಪ್ರವಹಿಸುವ ಹಳಿಗಳ ಮೇಲೆ ಹಾಲಿ ಮೆಟ್ರೋ ರೈಲುಗಳು ಸಂಚರಿಸುತ್ತವೆ. ಅಷ್ಟು ವೋಲ್ಟ್ ವಿದ್ಯುತ್ ಕಾರ್ಯ ಈ ಹಳದಿ ಮಾರ್ಗದಲ್ಲಿ ನಡೆಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜನರಿಗೆ BMRCL ಈ ಸೂಚನೆ ನೀಡಿದೆ.
ವಯಾಡಕ್ಟ್ ಮಾರ್ಗದಲ್ಲಿ 750 ವೋಲ್ಟ್ ವಿದ್ಯುತ್
ನಮ್ಮ ಮೆಟ್ರೋ ರೀಚ್ ಐದರ ವಿಭಾಗದ ಬಿಟಿಎಂ ಲೇಔಟ್ ನಿಲ್ದಾಣದಿಂದ ಆರ್‌ವಿ ರಸ್ತೆ ನಿಲ್ದಾಣದ ಬಫರ್ ಅಂತ್ಯದವರೆಗೆ ಮೆಟ್ರೋ ವಯಾಡಕ್ಟ್ ಮೂಲಕ 33 ಕೆವಿ ವಿದ್ಯುತ್ ಕೇಬಲ್ ಎಳೆಯಲಾಗಿದೆ. ಜಯದೇವ ನಿಲ್ದಾಣ, ರಾಗಿಗುಡ್ಡ ನಿಲ್ದಾಣ, ಆರ್‌ವಿ ರಸ್ತೆ ನಿಲ್ದಾಣವರೆಗೂ 750 ವೋಲ್ಟ್ ವಿದ್ಯುತ್ ಕೇಬಲ್ ಮೂಲಕ ಪ್ರವಹಿಸುತ್ತದೆ. ಈ ವೇಳೆ ಜನರು ಈ ವಯಾಡಕ್ಟ್ ಕೆಳಗೆ ಬರದಂತೆ ಮನವಿ ನಮ್ಮ ಮೆಟ್ರೋ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅನುಮತಿ ಇಲ್ಲದೇ ಪ್ರವೇಶ ಇಲ್ಲ
ಆರ್‌ವಿ ರಸ್ತೆ-ಬೊಮ್ಮಸಂದ್ರವರೆಗೆ ಸುಮಾರು 19 ಕಿಲೋ ಮೀಟರ್ ಉದ್ದದ ಈ ಮಾರ್ಗದ ಕಾಮಗಾರಿಯನ್ನು 2017ರಲ್ಲಿ ಆರಂಭಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಕೆಲಸಗಳು ನಡೆಯುತ್ತಿವೆ. ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಎಲ್ಲ ನಿಲ್ದಾಣಗಳ ವಯಾಡಕ್ಟ್ ಮಾರ್ಗವಾಗಿ ವಿದ್ಯುತ್ ಹರಿವು ಇರಲಿದ್ದು, ಅನುಮತಿ ಇಲ್ಲದೇ ಮಾರ್ಗದ ವಯಾಡಕ್ಟ್ ಪ್ರವೇಶಿಸುವಂತಿಲ್ಲ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್‌ಗೆ ಇನ್ನೊಂದು ಸೆಟ್ ರೈಲು: ಸಂಚಾರ ಆರಂಭ?
ಇದೇ ವರ್ಷ 2024ರ ಫೆಬ್ರವರಿಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಚೀನಾದಿಂದ ಬೋಗಿಗಳ ಪೂರೈಕೆ ತಡವಾಯಿತು. ಅಲ್ಲದೇ ಈ ಮಾರ್ಗದಲ್ಲಿ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ರೈಲುಗಳು ಓಡಲಿವೆ. ಹೀಗಾಗಿ ಚೀನಾದಿಂದ ಬಂದ್ ಒಂದು ಸೆಟ್ ರೈಲಿಗೆ ಅಗತ್ಯ ಪರೀಕ್ಷೆಗಳು ನಡೆಯುತ್ತಿವೆ.
ಮುಂದಿನ ಡಿಸೆಂಬರ್ ವೇಳೆಗೆ ಬೋಗಿ ಪೂರೈಕೆಯ ಗುತ್ತಿಗೆ ಪಡೆದು ಚೆನ್ನೈ ಘಟಕದಲ್ಲಿ ಉತ್ಪಾದನೆ ಆರಂಭಿಸಿರುವ ಚೀನಾದ ಕಂಪನಿಯು ಇನ್ನೊಂದು ಸೆಟ್ ರೈಲು ಪೂರೈಸಲಿದೆ. ಅಷ್ಟರಲ್ಲಿ ಬಹುತೇಕ ಪರೀಕ್ಷೆಗಳು ಪೂರ್ಣಗೊಂಡಿರಲಿವೆ. ಈ ವರ್ಷಾಂತ್ಯಕ್ಕೆ ಮೆಟ್ರೋ ಹಳದಿ ಮಾರ್ಗದಲ್ಲಿ ಜನ ಸಂಚಾರ ಆರಂಭವಾಗುವ ನಿರೀಕ್ಷೆಗಳು ಇವೆ.
ಸದ್ಯ ಈ ಹಳದಿ ಮಾರ್ಗದಲ್ಲಿ ಚೀನಾ ನಿರ್ಮಿತ ರೈಲುಗಳ ಪ್ರಾಯೋಗಿಕ ಸಂಚಾರಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಇಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಐಟಿ ಉದ್ಯೋಗಿಗಳು, ಸಾರ್ವಜನಿಕರು ಸೇರಿದಂತೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.












Click it and Unblock the Notifications