ಈಜಿಪುರ ಮೇಲ್ಸೇತುವೆ ಕಾಮಗಾರಿ ಬಿಗ್ ಅಪ್‌ಡೇಟ್, ಹೊಸ ಗಡುವು
Ejipura Flyover: ಬೆಂಗಳೂರಿನಲ್ಲಿ ವಿಳಂಬ ಕಾಮಗಾರಿಯಿಂದಲೇ ಹೆಚ್ಚು ಚರ್ಚೆಯಾದ ಕಾಮಗಾರಿ ಅಂತ ಏನಾದರೂ ಇದ್ದರೆ ಅದು ಈಜಿಪುರ ಮೇಲ್ಸೇತುವೆ ಕಾಮಗಾರಿ. ಹೌದು ಬೆಂಗಳೂರಿನ ಎರಡನೇ ಅತಿ ಉದ್ದದ ಈಜಿಪುರ ಮೇಲ್ಸೇತುವೆ ನಿರ್ಮಾಣ ಎನ್ನುವುದು ಕನಸಾಗಿ ಉಳಿದಿದೆ. ಕೊನೆಗೂ ಈ ಯೋಜನೆಗೆ ಹಿಡಿದಿರುವ ಗ್ರಹಣ ಕಳೆಯುವ ಲಕ್ಷಣಗಳು ಕಾಣಿಸುತ್ತಿವೆ. ಈಜಿಪುರದ ಈ ಕಾಮಗಾರಿ ನಡೆಯುತ್ತಿರುವುದು ಒಂದೆರಡು ವರ್ಷಗಳಿಂದ ಅಲ್ಲ. ಈ ಯೋಜನೆ ಪ್ರಾರಂಭವಾಗಿಯೇ ಬರೋಬ್ಬರಿ 7 ವರ್ಷಗಳಾಗಿವೆ. ಹೌದು ಕಳೆದ 7 ವರ್ಷಗಳಿಂದಲೂ ಈ ಯೋಜನೆ ಕುಂಟುತ್ತಲ್ಲೇ ಸಾಗುತ್ತಿದೆ. ಈಜಿದಲ್ಲೇ ಈಜುತ್ತಿರುವ ಈಜಿಪುರ ಕಾಮಗಾರಿ ಕೊನೆಗೂ ಮತ್ತೆ ಪ್ರಾರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ. ಅದರ ವಿವರ ಇಲ್ಲಿದೆ.
ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ನಿರಂತರವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲ್ಲೇ ಇದ್ದಾರೆ. ಈ ಭಾಗದಲ್ಲಿ ಕಾಮಗಾರಿ ವಿಳಂಬದಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದ್ದು, ಜನರು ಪರದಾಡುತ್ತಿದ್ದಾರೆ. ಇದೀಗ ಈ ಯೋಜನೆಗೆ ವೇಗ ನೀಡುವ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಕೆಲಸಗಳು ಆಗಿವೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಯೋಜನೆ ವಿಳಂಬಕ್ಕೆ ಕಾರಣರಾಗಿರುವ ಬಿಬಿಎಂಪಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲವು ಪ್ರಮುಖ ಬದಲಾವಣೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಈ ಕಾಮಗಾರಿಗೆ ಕಳೆದ ಏಳು ವರ್ಷದಿಂದ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಲ್ಲ. ಈ ಬಗ್ಗೆ ಬಿಬಿಎಂಪಿಯ ಯೋಜನಾ ವಿಭಾಗದ ಅಧಿಕಾರಿಗಳ ಮೇಲೆ ರಾಮಲಿಂಗಾರೆಡ್ಡಿ ಅವರು ಗರಂ ಆಗಿದ್ದಾರೆ.
ಹೊಸ ಗಡುವು ನಿಗದಿ: ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಇದೀಗ ಹೊಸ ಗಡುವು ನಿಗದಿ ಮಾಡಲಾಗಿದೆ. 15 ದಿನಕ್ಕೊಮ್ಮೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸುವ ಜವಾಬ್ದಾರಿ ಸಹ ನೀಡಲಾಗಿದೆ. ಈ ಕೆಲಸವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯೋಜನೆ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರ ಮಾಡಲಿದ್ದಾರೆ.

ಇನ್ನು ಈ ವರ್ಷ ಡಿಸೆಂಬರ್ ಅಂತ್ಯದ ಒಳಗಾಗಿ ಈ ಕಾಮಗಾರಿ ಮುಗಿಸಬೇಕು ಎಂದು ಹೊಸ ಗಡುವು ನಿಗದಿ ಮಾಡಲಾಗಿದೆ. ಈ ಯೋಜನೆಗೆ ಈಗಾಗಲೇ ಹಲವು ಗಡುವುಗಳನ್ನು ನಿಗದಿ ಮಾಡಲಾಗಿತ್ತು. ಆ ಗಡುವುಗಳು ಮುಕ್ತಾಯವಾಗಿ ವರ್ಷಗಳೇ ಕಳೆದರೂ ಮೇಲ್ಸೇತುವೆ ಕಾಮಗಾರಿ ಮಾತ್ರ ಅಂತ್ಯವಾಗಿಲ್ಲ.
ಈಜಿಪುರ ಮೇಲ್ಸೇತುವೆ ಯೋಜನೆಯ ವಿವರ
ನಗರದ ಕೋರಮಂಗಲ 100 ಅಡಿ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವ ಉದ್ದೇಶದಿಂದ ಈಜಿಪುರ ಮುಖ್ಯ ರಸ್ತೆಯ ಒಳ ವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಈ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದರ ಉದ್ದ 2.5 ಕಿ.ಮೀ. ಇದೆ. ಆದರೆ ಕಾಮಗಾರಿಯಲ್ಲಿ ಶೇ 10ರಷ್ಟು ಸಹ ಕೆಲಸವಾಗಿಲ್ಲ. ಬಿಬಿಎಂಪಿ ಹಾಗೂ ಗುತ್ತಿಗೆದಾರರ ಸಮನ್ವಯ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಲ್ಲೇ ಇದೆ. ಈಜಿದಲ್ಲೇ ಈಜುತ್ತಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ ಶೀಘ್ರ ದಡ ಸೇರಲಿ ಅಂತ ಬೆಂಗಳೂರಿನ ಜನ ಕಾಯುತ್ತಿದ್ದಾರೆ.












Click it and Unblock the Notifications