ಸೌಂದರ್ಯ ಲಹರಿ ಪಾರಾಯಣಕ್ಕೆ ಅರಮನೆ ಮೈದಾನಕ್ಕೆ ಸಹಸ್ರ ಸಹಸ್ರ ಭಕ್ತರು
ಬೆಂಗಳೂರು, ಅಕ್ಟೋಬರ್ 28: ವೇದಾಂತ ಭಾರತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಸೌಂದರ್ಯ ಲಹರಿ ಪಾರಾಯಣ ನಡೆಯಿತು. ಎಡತೊರೆ ಮಠದಿಂದ ಆಯೋಜಿಸಿರುವ ಸೌಂದರ್ಯ ಲಹರಿ ಪಾರಾಯಣ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವಚ್ಛತೆ ಪರಿಪಾಲನೆಯ ಟೊಂಕ ಕಟ್ಟಿರುವುದು ಅದಮ್ಯ ಚೇತನ ಫೌಂಡೇಷನ್.
ಕೇಂದ್ರ ಸಚಿವ ಅನಂತಕುಮಾರ್ ರ ಪತ್ನಿ ತೇಜಸ್ವಿನಿ ಅವರ ನೇತೃತ್ವ ಇರುವ ಸಂಸ್ಥೆ ಇದು. ಈ ಅದ್ಭುತ ಕಾರ್ಯಕ್ರಮದಲ್ಲಿ ಆಹಾರ ಹಾಗೂ ಪ್ರಸಾದ ಹಂಚಿಕೆಯ ಜವಾಬ್ದಾರಿ ಹೊತ್ತಿರುವುದು ಅದಮ್ಯ ಫೌಂಡೇಷನ್. ಈ 2 ದಿನದಲ್ಲಿ 1.6 ಲಕ್ಷ ಮಂದಿಗೆ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ.

ಇಡೀ ಕಾರ್ಯಕ್ರಮವು ಸೇವೆಯ ಜತೆಗೆ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ನಿದರ್ಶನ ಇದ್ದಂತೆ ಎಂಬ ಮಾತು ಕೇಳಿಬರುತ್ತಿದೆ. ಪ್ರಸಾದ- ಆಹಾರ ವಿತರಣೆಗೆ ಸಂಬಂಧಿಸಿದಂತೆ ಇಡೀ ಕಾರ್ಯಕ್ರಮದ ಪ್ರಮುಖಾಂಶಗಳು ಹೀಗಿವೆ.

* ಅಕ್ಟೋಬರ್ 28ರಂದು 60 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
* ಅದೇ ವೇಳೆ ಪ್ರಸಾದ ವಿತರಣೆಗಾಗಿ ನೂರಿಪ್ಪತ್ತು ಆಹಾರ ವಿತರಣೆ ಕೌಂಟರ್ ತೆರೆಯಲಾಗಿತ್ತು.
* ಏಕ ಕಾಲಕ್ಕೆ ಒಂದು ಕೌಂಟರ್ ನಲ್ಲಿ ಐನೂರಕ್ಕೂ ಹೆಚ್ಚು ಭಕ್ತರಿಗೆ ಆಹಾರ ವಿತರಿಸಲಾಯಿತು.
* ಪೊಂಗಲ್, ಶಾಲ್ಯಾನ್ನ ಹಾಗೂ ಮೊಸರನ್ನು ವ್ಯವಸ್ಥೆ ಮಾಡಲಾಗಿತ್ತು.
* ಒಂದು ಸಾವಿರ ಸ್ವಯಂಸೇವಕರು ಆಹಾರ ವಿತರಣೆಗಾಗಿ ನಿಯೋಜಿತರಾಗಿದ್ದರು.
* ನೀರು ಸರಬರಾಜಿಗೆ ನೂರೈವತ್ತು ಮಂದಿ ಸ್ವಯಂ ಸೇವಕರಿದ್ದರು.

* ನೀರು ಸರಬರಾಜಿ ಹಾಗೂ ತಟ್ಟೆಗಳ ಸಂಗ್ರಹಕ್ಕೆ ಎಪ್ಪತ್ತೆರಡು ಕಡೆ ವ್ಯವಸ್ಥೆ ಮಾಡಲಾಗಿತ್ತು.
* ಆಹಾರ ತಯಾರಿಕೆ, ಬಡಿಸುವುದು ಹಾಗೂ ಆ ನಂತರದ ವಿಲೇವಾರಿಗೆ ಪರಿಸರ ಸ್ನೇಹಿ ವ್ಯವಸ್ಥೆ ಮಾಡಲಾಗಿತ್ತು.
* ಆಹಾರವನ್ನು ಅದಮ್ಯ ಚೇತನದ ಅಡುಗೆ ಮನೆಯಲ್ಲಿ ತಯಾರು ಮಾಡಲಾಗಿದ್ದು, ಬಯೋಗ್ಯಾಸ್ ನಿಂದ ತಯಾರಿಸಲಾಗಿದೆ.
* ಭಾನುವಾರ ಸಹ ಕಾರ್ಯಕ್ರಮವಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಪರಿಸರ ಸ್ನೇಹಿಯಾಗಿಯೇ ಅಡುಗೆ ವ್ಯವಸ್ಥೆ ಮಾಡಲಾಗಿದೆ.
ಇಷ್ಟು ಮಾಹಿತಿ ಅಡುಗೆ- ಪ್ರಸಾದದ ಬಗ್ಗೆಯಾಯಿತು. ಇನ್ನು ಶನಿವಾರದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಒಂದು ಸಾವಿರ ಶಾಲೆಗಳ ಒಂದೂಕಾಲು ಲಕ್ಷ ಮಕ್ಕಳು ಪಾಲ್ಗೊಂಡಿದ್ದರು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ದಕ್ಷಿಣಾಮೂರ್ತ್ಯಷ್ಟಕದ ಹತ್ತು ಮಂತ್ರಗಳನ್ನು ಮಕ್ಕಳಿಗೆ ಹೇಳಿಕೊಡಲಾಗಿದೆ.












Click it and Unblock the Notifications