50 ಕೋಟಿ ರೂಪಾಯಿ ನಾಯಿ ಮಾಲೀಕನ ಅಸಲಿಯತ್ತು ಬಯಲು ಮಾಡಿದ ಇಡಿ ದಾಳಿ
ನನ್ನ ಹತ್ತಿರ ಇರುವ ನಾಯಿ ಬೆಲೆ 50 ಕೋಟಿ ರೂಪಾಯಿ ಎಂದು ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಬೆಂಗಳೂರಿನ ವ್ಯಕ್ತಿಗೆ ಜಾರಿ ನಿರ್ದೇಶನಾಲಯ ಶಾಕ್ ಕೊಟ್ಟಿದೆ. ಬೆಂಗಳೂರಿನ ನಿವಾಸಿ ಎಸ್ ಸತೀಶ್ ವಿರುದ್ಧ ನಿರ್ದೇಶನಾಲಯ (ED) ತನಿಖೆ ಆರಂಭಿಸಿದ್ದು, ಸಾಕಷ್ಟು ಅಚ್ಚರಿಯ ವಿಚಾರಗಳು ಬಹಿರಂಗವಾಗಿವೆ.
ಕ್ಯಾಡಬಾಂಬ್ ಒಕಾಮಿ ಎಂಬ ಅಪರೂಪದ ತಳಿಯನ್ನು ತಾನು 50 ಕೋಟಿ ರೂಪಾಯಿಗೆ ಖರೀದಿಸಿದ್ದೇನೆ ಎಂದು ಸತೀಶ್ ಹೇಳಿಕೊಂಡಿದ್ದರು. ಈ ಫೋಟೊಗಳು ಆನ್‌ಲೈನ್‌ನಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದವು, ಇದು ಅಪರೂಪದ ತಳಿಯ ನಾಯಿ, ಭಾರತದಲ್ಲಿ ನನ್ನ ಬಳಿ ಮಾತ್ರ ಇದೆ ಎಂದು ಹೇಳಿಕೊಂಡಿದ್ದರು.

ಈ ನಾಯಿ ಖರೀದಿಯ ಹಿಂದೆ ಹವಾಲಾ ವ್ಯವಹಾರ ಇರಬಹುದು, ಅಕ್ರಮ ಹಣದ ಬಳಕೆಯಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯಕ್ಕೆ ದೂರುಗಳು ದಾಖಲಾಗಿದ್ದವು.
ಇಡಿ ವಿಚಾರಣೆ ವೇಳೆ ಸತೀಶ್ ಅವರಿಗೆ ನಾಯಿಯನ್ನು ಕೂಡ ಕರೆದುಕೊಂಡು ಬರುವಂತೆ ಕೇಳಿದ್ದಾರೆ. ಆದರೆ ಸತೀಶ್ ನಾಯಿ ತನ್ನ ಸ್ನೇಹಿತನ ಜೊತೆ ಇದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಹಣಕಾಸಿನ ಅಕ್ರಮಗಳ ಎಲ್ಲಾ ಆರೋಪಗಳನ್ನು ಸತೀಶ್ ನಿರಾಕರಿಸಿದ್ದಾರೆ. ನಾಯಿ ನನ್ನ ಸ್ನೇಹಿತನದು ನಾನು ಅದರ ಜೊತೆ ಫೋಟೊ ತೆಗೆಸಿಕೊಂಡಿದ್ದೇನೆ ಎಂದಿದ್ದಾರೆ.
51 ವರ್ಷದ ಸತೀಶ್ ಬಳಿ ಇದ್ದ ನಾಯಿ ತೋಳನಾಯಿ ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್‌ನ ಅಪರೂಪದ ಮಿಶ್ರತಳಿಯಾಗಿದೆ. ಫೆಬ್ರವರಿಯಲ್ಲಿ ಅವರು ಬ್ರೋಕರ್ ಮೂಲಕ ಈ ನಾಯಿಯನ್ನು ಖರೀದಿಸಿದ್ದರು ಎಂದು ದಿ ಸನ್ ವರದಿ ಮಾಡಿತ್ತು.
ಇಡಿ ಅಧಿಕಾರಿಗಳು ಹೇಳಿದ್ದೇನು?
ಇಡಿ ಅಧಿಕಾರಿಗಳ ಪ್ರಕಾರ, ಸತೀಶ್ ಇತರ ನಾಯಿ ಸಾಕಾಣಿಕೆದಾರರಿಂದ ನಾಯಿಗಳನ್ನು ಬಾಡಿಗೆ ತಂದು ವಿಡಿಯೋಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಅವರು ಕೋಟ್ಯಂತರ ರೂಪಾಯಿಗಳಿಗೆ ವಿದೇಶಿ ತಳಿಗಳನ್ನು ಖರೀದಿಸಿದ್ದಾರೆ ಎಂದು ಸುಳ್ಳು ಹೇಳಿಕೊಳ್ಳುತ್ತಿದ್ದರು. ಸತೀಶ್ ಹಣಕಾಸು, ಆದಾಯ ಮೂಲಗಳು ಮತ್ತು ಜಿಎಸ್‌ಟಿ ದಾಖಲೆಗಳನ್ನು ಪರಿಶೀಲಿಸಲು ಇಡಿ ಆರಂಭಿಸಿತು, ಅಂತಿಮವಾಗಿ ಬೆಂಗಳೂರಿನಲ್ಲಿರುವ ಅವರ ವಿಶಾಲವಾದ ಬಂಗಲೆಯ ಮೇಲೆ ದಾಳಿ ನಡೆಸಿದೆ.
ದಾಖಲೆ ಪರಿಶೀಲನೆಯ ಸಮಯದಲ್ಲಿ, ಆ ನಾಯಿ ಬೆಲೆ 50 ಕೋಟಿ ರೂ. ಬೆಲೆ ಸುಳ್ಳು ಎಂದು ಕಂಡುಬಂದಿದೆ. ನಾಯಿಯನ್ನು ಹೊರದೇಶದಿಂದ ಆಮದು ಮಾಡಿಕೊಂಡಿರುವುದಕ್ಕೆ ಯಾವುದೇ ಕಾನೂನು ಬದ್ಧ ದಾಖಲೆಗಳಿಲ್ಲ ಎಂದರು. ಇನ್ನೂ ತನಿಖೆ ನಡೆಯುತ್ತಿದೆ, ತಪ್ಪು ಮಾಹಿತಿ ಹರಡುವಿಕೆ ಮತ್ತು ಸಂಭಾವ್ಯ ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಸತೀಶ್ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಇಡಿ ಅಧಿಕಾರಿಗಳು ಆರಂಭಿಸಿದ್ದಾರೆ.
ಎಸ್ ಸತೀಶ್ ಯಾರು?
ಸತೀಶ್ ಭಾರತೀಯ ನಾಯಿ ತಳಿಗಾರರ ಸಂಘದ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದಾರೆ. ಒಂದು ಕಾಲದಲ್ಲಿ ಕಟ್ಟಾ ನಾಯಿ ಪ್ರೇಮಿಯಾಗಿದ್ದ ಅವರು ವರ್ಷಗಳ ಹಿಂದೆ ನಾಯಿಗಳನ್ನು ಸಾಕುವುದನ್ನು ನಿಲ್ಲಿಸಿದ್ದರು ಎಂದು ವರದಿಯಾಗಿದೆ ಆದರೆ ಅಪರೂಪದ ತಳಿಗಳ ನಾಯಿಗಳಿವೆ ಎಂದು ಹೇಳಿಕೊಳ್ಳುತ್ತಲೇ ಇದ್ದರು. ಅವರ ಹೇಳಿಕೆಗಳ ಪ್ರಕಾರ, ಅವರು ತಮ್ಮ ನಾಯಿಗಳನ್ನು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ಹಣ ಮಾಡುತ್ತಿದ್ದರು, 30 ನಿಮಿಷಗಳ ಪ್ರದರ್ಶನಕ್ಕೆ ರೂ. 2.46 ಲಕ್ಷ ಮತ್ತು ದೀರ್ಘ ಪ್ರದರ್ಶನಗಳಿಗೆ ರೂ. 10 ಲಕ್ಷಕ್ಕೂ ಹೆಚ್ಚು ಹಣ ಪಡೆಯುತ್ತಿದ್ದರು.












Click it and Unblock the Notifications