ಬೆಂಗಳೂರಿನ ಈ ಭಾಗದ ವಾಣಿಜ್ಯ ಮಳಿಗೆದಾರರಿಗೆ ವಿಶೇಷ ಎಚ್ಚರಿಕೆ ಕೊಟ್ಟ ಜಿಬಿಎ
ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದ ನಂತರ, ಇದೀಗ ವಾಣಿಜ್ಯ ಮಳಿಗೆದಾರರಿಗೆ ಕೆಲವೊಂದು ಪ್ರಮುಖ ಸೂಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಪಾಲಿಕೆ ನೀಡಿದೆ.
ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಆಸ್ತಿದಾರರಿಗೆ ಶಾಕ್ ನೀಡಿದ ನಂತರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಎಲ್.ಇ.ಡಿ ಬೋರ್ಡ್‌ಗಳಿಗೆ ಸಂಬಂಧಿಸಿದಂತೆ ವಿಶೇಷ ಎಚ್ಚರಿಕೆ ನೀಡಲಾಗಿದೆ. ವಿಶೇಷ ಜಂಟಿ ಕಾರ್ಯಾಚರಣೆ ಮೂಲಕ 17ಕ್ಕೂ ಹೆಚ್ಚಿನ ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಎಲ್.ಇ.ಡಿ ಬೋರ್ಡ್‌ಗಳನ್ನು ಜನವರಿ 23ರಂದು ತೆರವುಗೊಳಿಸಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.

ನಗರದ ಸೌಂದರ್ಯ, ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಅನಧಿಕೃತ ಜಾಹೀರಾತುಗಳ ವಿರುದ್ಧ ಪ್ರತಿ ವಾರ ನಿಯಮಿತವಾಗಿ ಇದೇ ರೀತಿಯ ವಿಶೇಷ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ಅನುಮತಿ ಪಡೆಯದೇ ಜಾಹೀರಾತು ಫಲಕಗಳನ್ನು ಅಳವಡಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ತೆರವು ಕಾರ್ಯಾಚರಣೆ ಜೊತೆಗೆ ದಂಡನಾತ್ಮಕ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ವಾಣಿಜ್ಯ ಮಳಿಗೆದಾರರಲ್ಲಿ ಮನವಿ
ಇನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆದಾರರು ತಮ್ಮ ಮಳಿಗೆಗಳ ಮುಂಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಜಾಹೀರಾತು ಫಲಕವನ್ನು ಅಳವಡಿಸುವಂತಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸದಾಗಿ ಜಾರಿ ತಂದಿರುವ ಜಾಹೀರಾತು ನಿಯಮಾವಳಿಯಂತೆ ಅನುಮತಿ ಪಡೆಯದೇ ಅಳವಡಿಸುವ ಎಲ್ಲಾ ಜಾಹೀರಾತುಗಳು ಅನಧಿಕೃತವಾಗಿದ್ದು ಈ ಕೂಡಲೇ ವಾಣಿಜ್ಯ ಮಳಿಗೆ ಮಾಲೀಕರು ಸ್ವಯಂ ಆಗಿ ಎಲ್ಲಾ ರೀತಿಯ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಮಾಡಬೇಕೆಂದು ಆಯುಕ್ತರು ಮನವಿ ಮಾಡಿದ್ದಾರೆ.

ಇನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೃಷ್ಣರಾಜಪುರ ವಲಯ ವ್ಯಾಪ್ತಿಯ ಹಳೆ ಮದ್ರಾಸ್ ಮುಖ್ಯರಸ್ತೆಯ ರಸ್ತೆಯ ಎರಡು ಬದಿಗಳಲ್ಲಿನ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಅಳವಡಿಸಲಾಗಿರುವ ಅನಧಿಕೃತ ಜಾಹೀರಾತು ಹೋರ್ಡಿಂಗ್‌ಗಳು ಹಾಗೂ ಎಲ್.ಇ.ಡಿ ಜಾಹೀರಾತು ಫಲಕಗಳನ್ನು ನಗರ ಪಾಲಿಕೆಯ ಎಂಜಿನಿಯರ್ , ಕಂದಾಯ, ವಿದ್ಯುತ್ ಮತ್ತು ಆರೋಗ್ಯ ಇಲಾಖೆಯ ತಂಡವು ವಿಶೇಷ ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿದೆ.
ಕೃಷ್ಣರಾಜಪುರ ವಲಯದ ಜಂಟಿ ಆಯುಕ್ತರಾದ ಡಾ: ಸುಧಾ ಅವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಮುಖ್ಯರಸ್ತೆಯ ಎಡ ಮತ್ತು ಬಲ ಭಾಗಗಳಲ್ಲಿ ವಾಣಿಜ್ಯ ಮಳಿಗೆಗಳ ಮುಂಭಾಗಗಳಲ್ಲಿ ಅಳವಡಿಸಿಕೊಂಡಿದ್ದ 17ಕ್ಕೂ ಹೆಚ್ಚಿನ ಸಂಖ್ಯೆ ಅನಧಿಕೃತ ಜಾಹೀರಾತು ಹೋರ್ಡೀಂಗ್ಸ್ ಮತ್ತು ಎಲ್.ಇ.ಡಿ ಬೋರ್ಡ್ ಗಳನ್ನು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯ ಸಮಯದಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪೂರ್ವ ನಗರ ಪಾಲಿಕೆಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ಯಂತ್ರೋಪಕರಣ ಮತ್ತು ಸಿಬ್ಬಂದಿ ನಿಯೋಜನೆ
ಇನ್ನು ಈ ವಿಶೇಷ ಕಾರ್ಯಾಚರಣೆಯಲ್ಲಿ 1-ಕ್ರೇನ್, 2-ಗ್ಯಾಸ್ ಕಟ್ಟರ್ ಮೇಷಿನ್, 5-ಟ್ರ್ಯಾಕ್ಟರ್, 120 ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹಾಗೂ ಇನ್ನಿತರೆ ಯಂತ್ರೋಪಕರಗಳನ್ನು ಬಳಸಿಕೊಂಡು ಜಂಟಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications