E Khata: ಇ ಖಾತಾ ಇಲ್ಲದೆ ರಿಜಿಸ್ಟ್ರೇಷನ್ ಅಕ್ರಮಗಳಿಗೆ ಬ್ರೇಕ್: 5 ಅಧಿಕಾರಿಗಳ ತಲೆದಂಡ
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಪರಿಚಯಿಸಲಾಗಿರುವ ಇ ಖಾತಾ ವಿಚಾರದಲ್ಲಿ ಮೊದಲು ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಆಸ್ತಿಗಳ ಮಾರಾಟ ಮತ್ತು ಖರೀದಿ ವಿಚಾರದಲ್ಲಿ ಮೋಸ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಆದರೆ ಇದೀಗ ಆಸ್ತಿ ರಿಜಿಸ್ಟ್ರೇಷನ್ ವೇಳೆಯೇ ಇ ಖಾತಾ ವಿಚಾರದಲ್ಲಿ ಅಕ್ರಮಗಳು ನಡೆದಿದ್ದು, ಈ ಹಗರಣಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಏನಿದು ಇ ಖಾತಾ ಅಕ್ರಮ ಎನ್ನುವ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ಒಂದು ವರ್ಷದ ಮುನ್ನವಷ್ಟೇ ಪ್ರಾಪರ್ಟಿಗಳಿಗೆ ಡಿಜಿಟಲ್ ಆಸ್ತಿ ವಿವರದ ಇ ಖಾತಾ ಪರಿಚಯಿಸಿದೆ. ಮೊದಲಿಗೆ ಇದನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಇದಾದ ನಂತರ ಬೆಂಗಳೂರಿನಿಂದ ರಾಜ್ಯದಾದ್ಯಂತ ವಿಸ್ತರಿಸಲಾಯಿತು. ಆದರೆ ಇ ಖಾತಾಗೆ ಸಂಬಂಧಿಸಿದ ಗೊಂದಲ ಹಾಗೂ ದೂರುಗಳು ಇಂದಿಗೂ ಮುಂದುವರಿದಿದೆ.

ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಸಾಫ್ಟ್‌ವೇರ್ ದುರುಪಯೋಗಪಡಿಸಿಕೊಂಡಿರುವ ಆರೋಪ ಇದೀಗ ಕೇಳಿ ಬಂದಿದೆ. ಅದರಲ್ಲಿ ಮುಖ್ಯವಾಗಿ ಇ ಖಾತಾ ಇಲ್ಲದೆ ರಿಜಿಸ್ಟ್ರೇಷನ್ ಮಾಡಲಾಗಿದ್ದು ಸರ್ಕಾರವು ಕಾನೂನು ಕ್ರಮ ತೆಗೆದುಕೊಂಡಿದೆ ಎಂದು DH ವರದಿ ಮಾಡಿದೆ.
ಬೆಂಗಳೂರಿನಲ್ಲಿ ಕಡ್ಡಾಯ ಇ-ಖಾತಾ ಪರಿಶೀಲನಾ ನಿಯಮಗಳನ್ನು ಉಲ್ಲಂಘಿಸಿ ಆಸ್ತಿಗಳನ್ನು ನೋಂದಾಯಿಸಲು ಕಾವೇರಿ 2.0 ಸಾಫ್ಟ್‌ವೇರ್ ತಂತ್ರಾಂಶವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮುದ್ರಾಂಕ ಮತ್ತು ನೋಂದಣಿ (Stamps and Registration)ಇಲಾಖೆಯು 5 ಜನ ಸಬ್-ರಿಜಿಸ್ಟ್ರಾರ್ ಆಫೀಸರ್‌ಗಳನ್ನು ಅಮಾನತುಗೊಳಿಸಿದೆ. ಆಸ್ತಿಗಳ ನೋಂದಣಿಯಲ್ಲಿ ಅಕ್ರಮಗಳು ನಡೆದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬಹಿರಂಗವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇ ಖಾತಾ ಇಲ್ಲದೆ ರಿಜಿಸ್ಟ್ರೇಷನ್
ಇನ್ನು ಕರ್ನಾಟಕ ಸರ್ಕಾರವು ಆಸ್ತಿಗಳ ಪರಿಶೀಲನೆ ಹಾಗೂ ರಿಜಿಸ್ಟ್ರೇಷನ್‌ಗೆ ಇ ಖಾತಾ ಕಡ್ಡಾಯ ಮಾಡಿದೆ. ಆದರೆ ಇ ಖಾತಾ ಇಲ್ಲದೆಯೂ ಕೆಲವು ಕಡೆಗಳಲ್ಲಿ ರಿಜಿಸ್ಟ್ರೇಷನ್ ನಡೆದಿರುವ ಆರೋಪ ಕೇಳಿ ಬಂದಿದೆ. ಕಾವೇರಿ 2.0ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ ಎಂದು ನೋಂದಣಿ ಮಹಾನಿರ್ದೇಶಕರು (ಐಜಿಆರ್) ತಿಳಿಸಿದ್ದಾರೆ.
ವಿಶೇಷವಾಗಿ ಆಸ್ತಿ ನೋಂದಣಿಗಳು ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟಿದ್ದರೆ ಈ ವಿನಾಯಿತಿ ಅನುಸರಿಸಬಹುದಾಗಿದೆ. ಆದರೆ, ಸರ್ಜಾಪುರ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ ನ್ಯಾಯಾಲಯದ ಆದೇಶಗಳು ಇಲ್ಲದಿದ್ದರೂ ಸಹ ಆಸ್ತಿ ಮಾರಾಟ ಪತ್ರಗಳನ್ನು ನೋಂದಾಯಿಸಲು ಈ ಆಯ್ಕೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಆಸ್ತಿ ಮಾರಾಟ ಪತ್ರಗಳನ್ನು ನೋಂದಾಯಿಸುವ ಸಂದರ್ಭದಲ್ಲಿ ಇ ಖಾತಾ ಪರಿಶೀಲನೆ ಮಾಡುವುದು ತಪ್ಪಿಸಲಾಗಿದೆ. ಅಧಿಕಾರಿಗಳು ಸರ್ಜಾಪುರ ಸಬ್-ರಿಜಿಸ್ಟ್ರಾರ್ ರವಿ ಸಂಕನ ಗೌಡ ಅವರನ್ನು ತಕ್ಷಣ ಅಮಾನತುಗೊಳಿಸಲಾಗಿದೆ.
ಬಾಣಸವಾಡಿ, ವರ್ತೂರು ಮತ್ತು ಹಲಸೂರು ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇದೇ ರೀತಿಯ ಇ ಖಾತಾ ಪರಿಶೀಲನೆ ಉಲ್ಲಂಘನೆಗಳು ಆಗಿವೆ ಎಂದು ಹೇಳಲಾಗಿದೆ. ಇಲಾಖೆಯು ಇಲಾಖಾ ವಿಚಾರಣೆ ಬಾಕಿ ಇರುವ ನಾಲ್ವರು ಸಬ್-ರಿಜಿಸ್ಟ್ರಾರ್‌ಗಳನ್ನು ಅಮಾನತುಗೊಳಿಸಿದೆ. ಒಬ್ಬರು ನಿವೃತ್ತರಾಗಿದ್ದಾರೆ. ಅಮಾನತುಗೊಂಡ ಅಧಿಕಾರಿಗಳ ವಿವರ ಈ ರೀತಿ ಇದೆ ಎನ್ ಸತೀಶ್ ಕುಮಾರ್, ಶ್ರೀಧರ್, ಗಿರೀಶ್ ಚಂದ್ರ ಹಾಗೂ ಆರ್ ಪ್ರಭಾವತಿ.












Click it and Unblock the Notifications