E-Khata: ಇ - ಖಾತಾ ಗೊಂದಲಗಳಿಗೆ ಬ್ರೇಕ್, ಖಾತಾ ಮಾಡಿಸಲು ಬಿಬಿಎಂಪಿಯಿಂದ ಹೊಸ ವಿಧಾನ!
E- Khata Big Update: ಬೆಂಗಳೂರಿನಲ್ಲಿ ಇ - ಖಾತಾಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಆಸ್ತಿಗಳ ರಕ್ಷಣೆ ಹಾಗೂ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಬಿಬಿಎಂಪಿಯು ಇ - ಖಾತಾ ಕಡ್ಡಾಯ ಮಾಡಿದೆ. ಆದರೆ ಬೆಂಗಳೂರಿನಲ್ಲಿ ಇ - ಖಾತಾದಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದು. ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ಕೆಲವು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದೆ. ಅಲ್ಲದೆ ಸರ್ವರ್ ಡೌನ್ ಸಮಸ್ಯೆಯೂ ಇದೆ. ಇದೀಗ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಇದೀಗ ಇ- ಖಾತಾ ಸೇವೆಯನ್ನು ಸಂಪೂರ್ಣ ಆನ್‌ಲೈನ್‌ನಲ್ಲೇ (Faceless) ನೀಡಲು ಬಿಬಿಎಂಪಿ ಕ್ರಮ ತೆಗೆದುಕೊಂಡಿದೆ ಅದೇನು ಎನ್ನುವ ವಿವರ ಇಲ್ಲಿದೆ.
ಆದಾಯ ತೆರಿಗೆ ಇಲಾಖೆಯ ಸೂಚನೆಯ ಅನುಸಾರ ಇ - ಖಾತಾದಲ್ಲಿ ಹೊಸ ಮಾದರಿಗೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿಗಳ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಜನರಿಗೆ ಸರಳವಾಗಿ ಇ -ಖಾತಾ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಇ ಖಾತಾಗೆ ಸಂಬಂಧಿಸಿದಂತೆ ಅರ್ಜಿಗಳ ಸಂಖ್ಯೆ ಹೆಚ್ಚಳವಾಗಿದೆ. ಮುಂದಿನ ತಿಂಗಳು 10ರ ಒಳಗಾಗಿ ಇ - ಖಾತಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ನಗರದಲ್ಲೂ ಇ ಖಾತಾ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಇ ಖಾತಾ ಪಡೆಯಲು ತೊಂದರೆ ಆಗುತ್ತಿದೆ ಎಂದು ಬೆಂಗಳೂರಿನ ಆಸ್ತಿದಾರರು ದೂರಿದ್ದಾರೆ. ಕೊನೆಗೂ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ.
ಇ - ಖಾತಾ ಮಾಡಿಸುವಲ್ಲಿ ಕೆಲವು ಕಂದಾಯ ಅಧಿಕಾರಿಗಳು ವಿಳಂಬ ಧೋರಣೆ ಹಾಗೂ ಕಿರುಕುಳ ಕೊಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.
ಇದೀಗ ಆದಾಯ ತೆರಿಗೆ ಇಲಾಖೆಯ ಸೂಚನೆಯ ಅನ್ವಯ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ಒತ್ತಡ ಹಾಗೂ ನಿಯಂತ್ರಣ ಕಡಿಮೆ ಮಾಡುವ ಉದ್ದೇಶದಿಂದ ಇ-ಖಾತಾ ವಿತರಣಾ ಪ್ರಕ್ರಿಯೆ ಆನ್‌ಲೈನ್ ಅಥವಾ ಕಚೇರಿಗಳಿಗೆ ಭೇಟಿ ನೀಡದಂತೆ ಮಾಡುವ ಉದ್ದೇಶದಿಂದ ಹೊಸ ಮಾದರಿಯನ್ನು ಇಷ್ಟರಲ್ಲೇ ಪರಿಚಯಿಸುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
ಕೇವಲ ಶೇ 5%: ಬೆಂಗಳೂರಿನಲ್ಲಿ ಅಂದಾಜು 24 ಲಕ್ಷ ಆಸ್ತಿಗಳಿಗೆ. ಈ ಆಸ್ತಿಗಳಲ್ಲಿ ಹಲವು ಆಸ್ತಿಗಳಿಗೆ ಆಸ್ತಿ ಮಾಲೀಕರು ಯಾವುದೇ ಖಾತಾ ಪಡೆದುಕೊಂಡಿಲ್ಲ ಎನ್ನುವ ಆರೋಪ ಇದೆ. ಅಲ್ಲದೆ 5 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಯಾವುದೇ ಖಾತಾ ಇಲ್ಲ ಅಂತ ಹೇಳಲಾಗಿದೆ. ಬಿಬಿಎಂಪಿಯು ಇಲ್ಲಿಯ ವರೆಗೆ ಬೆಂಗಳೂರಿನಲ್ಲಿ ಅಂದಾಜು 1.3 ಲಕ್ಷ ಆಸ್ತಿಗಳಿಗೆ ಅಂತಿಮ ಇ-ಖಾತಾ ಪ್ರಮಾಣಪತ್ರಗಳನ್ನು ವಿತರಿಸಿದೆ ಎಂದು ಹೇಳಲಾಗಿದೆ. ಆದರೆ ಬೆಂಗಳೂರಿನಲ್ಲಿ ಒಟ್ಟು 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಈಗ ಬಿಬಿಎಂಪಿ ಕೊಟ್ಟಿರುವ ಅಂತಿಮ ಇ -ಖಾತಾ ಪ್ರಮಾಣಪತ್ರ ಕೇವಲ ಶೇ 5%ರಷ್ಟು ಮಾತ್ರ. ಇನ್ನು ಬಿಬಿಎಂಪಿಯು ಇ -ಖಾತಾಗೆ ಸಂಬಂಧಿಸಿದಂತೆ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸುತ್ತಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಇದೀಗ 64 ಸಹಾಯಕ ಕಂದಾಯ ಅಧಿಕಾರಿಗಳು ಇ-ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಈ ಕಂದಾಯ ಅಧಿಕಾರಿಗಳಿಗೆ 200 ಲಾಗಿನ್ ಐಡಿಗಳನ್ನು ಕೊಡಲಾಗಿದೆ. ಇ-ಖಾತಾವನ್ನು ಆಸ್ತಿದಾರರು ತಾವೇ ಮಾಡಿಕೊಳ್ಳಲು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಜನ ಆನ್‌ಲೈನ್‌ನಲ್ಲಿಯೇ ಮಾಡಿಕೊಳ್ಳಬಹುದು. ಇದಕ್ಕಾಗಿ ಅಧಿಕಾರಿಗಳನ್ನು ಭೇಟಿ ಮಾಡುವ ಅಥವಾ ಕಚೇರಿಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳ ಭೇಟಿ ತಪ್ಪಿಸಲು ಕ್ರಮ: ಬೆಂಗಳೂರಿನಲ್ಲಿ ಇ -ಖಾತಾ ನೀಡುವುದಕ್ಕೆ ಸಮಸ್ಯೆ ಆಗುತ್ತಿರುವುದು. ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಳ ಹಾಗೂ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ ಇದೀಗ ಈ ಎಲ್ಲಾ ಸಮಸ್ಯೆಗಳಿಗೂ ಏಕಕಾಲದಲ್ಲಿ ಪರಿಹಾರ ಕಂಡುಕೊಳ್ಳಲು ಪಾಲಿಕೆ ಮುಂದಾಗಿದೆ. ಅಂತಿಮ ಇ-ಖಾತಾ ಕೊಡುವುದು ಸಂಪೂರ್ಣ ದಾಖಲೆಗಳ ಆಧಾರದ ಮೇಲೆ ಇದೆ. ಈ ಸಂರ್ಭದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.
ಬೆಂಗಳೂರಿನ ಆಸ್ತಿಗಳ ಇ - ಖಾತಾಗೆ ಸಂಬಂಧಿಸಿದಂತೆ ಮಾರಾಟ ಪತ್ರ, ನೋಂದಾಯಿತ ಪತ್ರ ಹಾಗೂ ಆಸ್ತಿ ನೋಂದಣಿ ಪ್ರಕ್ರಿಯೆಗಳನ್ನು ಪರಿಶೀಲನೆ ಮಾಡಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ತಿದ್ದುಪಡಿ ಪ್ರಕ್ರಿಯೆಗೆ ಅನುಮೋದನೆ ಕೊಡಲಿದ್ದಾರೆ. ಹೀಗಾಗಿ ಬಿಬಿಎಂಪಿ ಕಚೇರಿಗಳಿಗೆ ಆಸ್ತಿದಾರರು ಬರುವ ಅವಶ್ಯಕತೆ ಇಲ್ಲ. ಹೀಗಾಗಿ ಇನ್ನಷ್ಟು ಹೊಸ ಮಾದರಿಯನ್ನು ಇಷ್ಟರಲ್ಲೇ ಅಭಿವೃದ್ಧಿ ಮಾಡುವುದಾಗಿ ಅವರು ಹೇಳಿದ್ದಾರೆ.
ಇ - ಖಾತಾಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೊಂದಲಗಳು ಸೃಷ್ಟಿಯಾದ ಬೆನ್ನಲ್ಲೇ ಬಿಬಿಎಂಪಿಯು ಈ ಕ್ರಮಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಶೇ 5ರಷ್ಟು ಆಸ್ತಿಗಳಿಗೆ ಮಾತ್ರ ಇ - ಖಾತಾ ನೀಡಲಾಗಿದೆ. ನಗರದಲ್ಲಿ ಒಟ್ಟು 24 ಲಕ್ಷ ಆಸ್ತಿಗಳಿವೆ ಎಲ್ಲಾ ಆಸ್ತಿಗಳನ್ನೂ ಸಹ ಇ ಖಾತಾ ವ್ಯಾಪ್ತಿಗೆ ತರುವುದಕ್ಕೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ.












Click it and Unblock the Notifications