ಸಿಟ್ಟಿನ ಭರದಲ್ಲಿ ಪತ್ನಿಯ ಗುಪ್ತಾಂಗವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟ ಪತಿ
ಬೆಂಗಳೂರು, ಸೆಪ್ಟೆಂಬರ್ 26 : ಇಲ್ಲಿನ ಬಾಣಸವಾಡಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಕ್ರೂರವಾಗಿ ದೈಹಿಕ ಹಲ್ಲೆ ನಡೆಸಿದ್ದಾನೆ. ಆಕೆಯ ಗುಪ್ತಾಂಗವೂ ಸೇರಿದಂತೆ ದೇಹವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟಿದ್ದಾನೆ. ಈ ಘಟನೆ ಇತ್ತೀಚೆಗೆ ನಡೆದಿದೆ.
ಕುಡಿದು ರಾತ್ರಿ ತಡವಾಗಿ ಬಂದವನು ಪತ್ನಿಯ ಜತೆಗೆ ಜಗಳ ತೆಗೆದಿದ್ದಾನೆ. ಆ ನಂತರ ವೈರ್ ನಿಂದ ಪತ್ನಿಯ ಕೈ ಕಾಲು ಕಟ್ಟಿಹಾಕಿದ್ದಾನೆ. ಆ ನಂತರ ಮನಸೋ ಇಚ್ಛೆ ಹೊಡೆದಿದ್ದಾನೆ. ಇಸ್ತ್ರಿ ಪೆಟ್ಟಿಗೆಯಿಂದ ಕೈ- ಕಾಲು ಸುಟ್ಟು ಹಾಕಿದ್ದಲ್ಲದೆ ಆಕೆಯ ಗುಪ್ತಾಂಗವನ್ನು ಸುಟ್ಟು ಹಾಕಿದ್ದಾನೆ. ಯಾವಾಗ ಚಾಕುವಿನ ಹಿಡಿಯಿಂದ ಆಕೆ ತಲೆಗೆ ಬಲವಾಗಿ ಹೊಡೆದನೋ ಆ ವೇಳೆ ಆಕೆಗೆ ಪ್ರಜ್ಞೆ ತಪ್ಪಿದೆ.

ಪತ್ನಿಯ ತವರು ಮನೆಯಿಂದ ಹೆಚ್ಚಿನ ಆಭರಣಗಳನ್ನು ತರುವಂತೆ ಆತ ಒತ್ತಡ ಹಾಕುತ್ತಿದ್ದ. ಇದೇ ವಿಚಾರವಾಗಿ ದಂಪತಿಯ ಮಧ್ಯೆ ಪದೇಪದೇ ಜಗಳ ಕೂಡ ಆಗುತ್ತಿತ್ತು. ಆದರೆ ಈ ಬಾರಿ ಹಲ್ಲೆ ನಡೆಸಿದ ವೇಳೆ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದ ಆಕೆ ಮಾರನೇ ದಿನದವರೆಗೂ ಮನೆಯಲ್ಲಿ ಅದೇ ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಮೊದಲನೇ ಸಲವಲ್ಲ. ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಪೋಷಕರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವವರೆಗೆ ನನಗೆ ನಿಂತುಕೊಳ್ಳಲು ಕೂಡ ಶಕ್ತಿ ಇರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ.












Click it and Unblock the Notifications